ಸಾರಾಂಶ
ರೈತರ, ಕೃಷಿ ಕೂಲಿಕಾರರ ಸಾಲ ಮನ್ನಾ ಮಾಡಬೇಕು ಮತ್ತು ರೈತರಿಗೆ ಬಡ್ಡಿ ರಹಿತ ಸುಲಭ ಸಾಲ ಸಿಗುವಂತೆ ಕಾನೂನು ಮಾಡಬೇಕು, ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ, ಬೀಜ, ಕೃಷಿ ಸಲಕರಣೆ ಸಿಗುವಂತೆ ಯೋಜನೆ ರೂಪಿಸಬೇಕು.
ಕುಷ್ಟಗಿ:
ಕಾರ್ಮಿಕರು ಮತ್ತು ರೈತ ಕೃಷಿ ಕೂಲಿಕಾರರ ಪರ ನೀತಿ ಜಾರಿಗೊಳಿಸಲು ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ಹೋರಾಟ ಸಮಿತಿ ಆಶ್ರಯದಲ್ಲಿ ಕಾರ್ಮಿಕರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯು ಪಟ್ಟಣದ ಮಲ್ಲಯ್ಯ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಂಘಟನೆಗಳ ಮುಖಂಡ ಆರ್.ಕೆ. ದೇಸಾಯಿ ಮಾತನಾಡಿ, ರೈತರ, ಕೃಷಿ ಕೂಲಿಕಾರರ ಸಾಲ ಮನ್ನಾ ಮಾಡಬೇಕು ಮತ್ತು ರೈತರಿಗೆ ಬಡ್ಡಿ ರಹಿತ ಸುಲಭ ಸಾಲ ಸಿಗುವಂತೆ ಕಾನೂನು ಮಾಡಬೇಕು, ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ, ಬೀಜ, ಕೃಷಿ ಸಲಕರಣೆ ಸಿಗುವಂತೆ ಯೋಜನೆ ರೂಪಿಸಬೇಕು. ತಾಲೂಕಿನ ಎಲ್ಲ ಕೆರೆಗಳಿಗೆ ಕೃಷ್ಣಾ ಬಿ ಸ್ಕಿಂನಲ್ಲಿ ನೀರು ತುಂಬಿಸುವ ಕೆಲಸಕ್ಕೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.ಕಲಾವತಿ ಮೆಣೇದಾಳ ಮಾತನಾಡಿ, ಅಂಗನವಾಡಿ ನೌಕರರಿಗೆ ₹ 26 ಸಾವಿರ ಕನಿಷ್ಠ ವೇತನ ಹಾಗೂ ಮಾಸಿಕ ಪಿಂಚಣಿ ₹ 10 ಸಾವಿರ ಕೊಡಬೇಕು. 29 ಕಾರ್ಮಿಕ ಕಾನೂನು ರದ್ದುಗೊಳಿಸಿ ಹೊಸದಾಗಿ ತಂದಿರುವ 4 ಸಂಹಿತೆ ರದ್ದುಗೊಳಿಸಬೇಕು. ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಗಮ್ಮ ಗುಳಗೌಡರ, ಮುಖಂಡರಾದ ರಂಗಪ್ಪ ದೊರೆ, ಅನ್ನಪೂರ್ಣಾ, ಅಕ್ಕಮ್ಮ ಮರೇಗೌಡರ, ಶೇಕಪ್ಪ ಬಳೂಟಗಿ, ಮಲ್ಲಿಕಾರ್ಜುನಗೌಡ, ಸಂಗನಗೌಡ, ಅಡಿವೆಪ್ಪ, ಬಸವರಾಜ ಮೇಳಿ, ಕವಿತಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಅನೇಕ ಇಲಾಖೆಯ ಸಿಬ್ಬಂದಿ ಇದ್ದರು.