ಸಾರಾಂಶ
ಕಲಬುರಗಿ, ಮಂಗಳೂರು ಸೇರಿ ರಾಜ್ಯದ ನಾಲ್ಕು ಕಡೆ ಹಜ್ ಭವನ ನಿರ್ಮಾಣ: ಸಚಿವ ಜಮೀರ್ ಅಹ್ಮದ್ ಖಾನ್‌ಕನ್ನಡಪ್ರಭ ವಾರ್ತೆ, ಬೀದರ್
ವಕ್ಫ್ ಜಮೀನಿನ ಅತಿಕ್ರಮಣ ಹಾಗೂ ಖಾತಾ ಸೇರಿದಂತೆ ಇತರೆ ವಿಷಯಗಳ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ನೀಡಲು ಪ್ರತಿ ತಿಂಗಳು 3 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ನಡೆಸಲಾಗುವುದು, ಬೆಂಗಳೂರಲ್ಲಿ ಸಮಸ್ಯೆ ಆಲಿಸಲು 2 ದಿನ ಮೀಸಲಿಡುತ್ತೇನೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.ಸೋಮವಾರ ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಪಟೇಲ್ ಫಂಕ್ಷನ್ ಹಾಲ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಔಕಾಫ್ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಕ್ಫ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲ ಸಲ ವಕ್ಫ್ ಅದಾಲತ್ ಕಾರ್ಯಕ್ರಮ ಬೀದರ್ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಖಾತಾ, ಸ್ಮಶಾನ ಭೂಮಿ ಸೇರಿದಂತೆ ಇತರೆ ವಕ್ಫ್ ಜಮೀನಿಗೆ ಸಂಬಂಧಿಸಿದ ಒಟ್ಟು 178 ಅಹವಾಲುಗಳು ಜನರಿಂದ ಬಂದಿದ್ದು ಈ ಕುರಿತು ಚರ್ಚಿಸಿ ಅವುಗಳಿಗೆ ಪರಿಹಾರ ನೀಡಲು ಅಧಿಕಾರಿಗಳ ಸಭೆ ನಡೆಸಲಾಗುವುದು. ಮುಸ್ಲಿಂ ಸಮುದಾಯದ ಜನರು ಹೆಚ್ವಿರುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಇಲ್ಲದಿದ್ದರೆ ಅಲ್ಲಿ ಸರ್ಕಾರಿ ಜಾಗವಿದ್ದಲ್ಲಿ ಅದನ್ನು ಸ್ಮಶಾನಕ್ಕೆ ಭೂಮಿ ನೀಡಲು ಅವಕಾಶವಿದೆ, ಮುಂದಿನ ಒಂದು ತಿಂಗಳಿನಲ್ಲಿ ರಾಜ್ಯಾದ್ಯಂತ ಅವಶ್ಯಕತೆ ಇರುವ ಕಡೆ ಅಲ್ಪಸಂಖ್ಯಾತರಿಗೆ ಸ್ಮಶಾನ ಭೂಮಿ ನೀಡಲಾಗುವುದು ಎಂದು ಭರವಸೆ ನೀಡಿದರು.ಕಲಬುರಗಿ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹಜ್ ಭವನ ನಿರ್ಮಿಸಲಾಗುವುದು. ತಮ್ಮ ಸಮಸ್ಯೆಗಳನ್ನು ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ. ವಕ್ಫ್ ಆಸ್ತಿ ವಯಕ್ತಿಕವಾಗಿ ಯಾರದ್ದೂ ಅಲ್ಲ ಅದು ಭಗವಂತನದಾಗಿದೆ ಅದನ್ನು ಯಾರೇ ಅತಿಕ್ರಮಣ ಮಾಡಿದರೂ ಬಿಡುವುದಿಲ್ಲ. ಇಂದಿನ ತಮ್ಮ ಎಲ್ಲಾ ಅರ್ಜಿಗಳನ್ನು ಪ್ರಥಮ ಆಧ್ಯತೆಯಾಗಿ ಪರಿಗಣಿಸುವುದರ ಜೊತೆಗೆ ತಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಭರವಸೆ ನೀಡಿದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್‌ಖಾನ್, ವಕ್ಪ್ ಬೋರ್ಡ್ ರಾಜ್ಯಾದ್ಯಕ್ಷ ಅನ್ವರ್ ಭಾಷಾ ಹಾಗೂ ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ ಅವರು ಮಾತನಾಡಿದರು.ಜನರು ಸ್ಮಶಾನ ಭೂಮಿ ಸಮಸ್ಯೆ, ವಕ್ಫ್ ಭೂಮಿ ಅತಿಕ್ರಮಣ, ಕಮಿಟಿ ಸಮಸ್ಯೆಗಳ ಕುರಿತಾಗಿ ಹೆಚ್ಚಿನ ಅರ್ಜಿಗಳನ್ನು ಸಚಿವರ ಗಮನಕ್ಕೆ ತಂದರು. ಈ ವೇಳೆ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹ್ಮದ್ ಫಿರೋಜ್ ಖಾನ್, ಕಾಂಗ್ರೆಸ್ ಮುಖಂಡರಾದ ಅಯಾಜ್ ಖಾನ್, ಮನ್ನಾನ್ ಸೇಠ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ವಕ್ಫ್ ಬೋರ್ಡ್, ನಗರಸಭೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.ವಕ್ಫ ಅದಾಲತ್: ಜನರನ್ನು ನಿಯಂತ್ರಿಸಿದ ಸಚಿವ ಜಮೀರ್
ಬೀದರ್: ರಾಜ್ಯದಲ್ಲಿ ಪ್ರಥಮ ಬಾರಿಗೆ ಬೀದರ್‌ನಲ್ಲಿ ವಕ್ಫ ಸಂಪತ್ತಿನ ಕುರಿತು ದೂರು ದುಮ್ಮಾನ ಕೇಳಲು ಆಯೋಜಿಸಿದ್ದ ವಕ್ಫ ಅದಾಲತ್‌ನ ವೇದಿಕೆ ಕಡೆ ಹೆಚ್ಚು ಜನ ಬರುತ್ತಿರುವುದನ್ನು ಕಂಡು ಅಲ್ಪಸಂಖ್ಯಾತರ ಹಾಗೂ ವಕ್ಫ ಸಚಿವ ಜಮೀರ್ ಅಹ್ಮದ ಖಾನ್ ಅವರೆ ಖುದ್ದು ಎದ್ದು ನಿಂತು ಮೈಕ್ ಹಿಡಿದು ಜನರನ್ನು ನಿಯಂತ್ರಿಸಿದ ಪ್ರಸಂಗ ನಡೆಯಿತು.ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಪಟೇಲ್ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ವಕ್ಫ ಅದಾಲತ್ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು. ಸಚಿವರು ಬರುವವರೆಗೆ ದೂರು ಕೊಡುವವರ ಹೆಸರು ನೋಂದಣಿ ಮಾಡಲಾಗಿತ್ತು, ಸಚಿವರು ವೇದಿಕೆ ಮೇಲೆ ಬರುತ್ತಲೆ ಜನರು ಕೂಡ ತಂಡೋಪತಂಡವಾಗಿ ವೇದಿಕೆಯತ್ತ ಬರತೊಡಗಿದರು. ಇದನ್ನು ಗಮನಿಸಿದ ಸಚಿವ ಜಮೀರ್ ಅಹ್ಮದ ಅವರು ಎಲ್ಲರನ್ನೂ ವೇದಿಕೆ ಬಳಿಯಿಂದ ದೂರ ಕೂರಲು ತಿಳಿ ಹೇಳಿದರು.
------ಸಚಿವ ಜಮೀರ್ ಗಮನಸೆಳೆದ ದೂರುದಾರ
ಬೀದರ್: ಜಿಲ್ಲೆಯಲ್ಲಿ ವಕ್ಫ ಸಂಪತ್ತು ಬಹಳಷ್ಟು ಅತಿಕ್ರಮಣವಾಗಿದೆ. ತಾವು ಸಧ್ಯ ನಡೆಸುತ್ತಿರುವ ವಕ್ಫ ಅದಾಲತ್ ಸ್ಥಳವೂ ವಕ್ಫ ಆಸ್ತಿಯಾಗಿದ್ದು ಇದು ಕೂಡ ಅತಿಕ್ರಮಣವಾಗಿದ್ದು ಎಂದು ಹೇಳುವ ಮೂಲಕ ಎಂಐಎಂನ ಶಫಿ ಬೇಗ ಅವರು ಸಚಿವ ಜಮೀರ್ ಅಹ್ಮದ ಖಾನ್ ಅವರ ಗಮನ ಸೆಳೆದರು.
ಅವರು ಎಂಐಎಂ ಪಕ್ಷದ ನಗರ ಸಭೆ ಸದಸ್ಯ ಮುನ್ನಾ ನೇತೃತ್ವದಲ್ಲಿ ವಕ್ಫ ಆಸ್ತಿಗೆ ಸಂಬಂಧಿಸಿದಂತೆ ಸಚಿವರಿಗೆ ದೂರು ನೀಡಲು ಬಂದಾಗ, ವಕ್ಫ ಬೊರ್ಡಗೆ ಯಾವುದೇ ಅಧಿಕಾರ ಇಲ್ಲದ ಕಾರಣ ವಕ್ಫ ಆಸ್ತಿ ಅತಿಕ್ರಮಣವಾಗುತ್ತಿದೆ ಇದನ್ನು ನಿಯಂತ್ರಿಸಬೇಕಾದರೆ ಬೋರ್ಡ್‌ಗೆ ಅಧಿಕಾರ ನೀಡಿ, ಇಲ್ಲಿನ ಅಧಿಕಾರಿಗಳಿಗೆ ಕೇವಲ ನೋಟಿಸ್ ನೀಡುವ ಅಧಿಕಾರ ಮಾತ್ರ ಇದೆ. ನಗರ ಸಭೆಯಾಗಲಿ ಅಥವಾ ಇನ್ನಿತರ ಸಂಸ್ಥೆಗಳಿಗೆ ಇರುವಂತೆ ವಕ್ಫ ಬೋರ್ಡಗೆ ಕೂಡ ಅಧಿಕಾರ ನೀಡಿ ಎಂದು ಮನವಿ ಮಾಡಿದರು.ಈ ಹಿಂದೆ ದೇಶದಲ್ಲಿ ಮನಮೋಹನಸಿಂಗ್ ಸರ್ಕಾರ ಇದ್ದಾಗ ದೇಶದಾದ್ಯಂತ ವಕ್ಫ ಆಸ್ತಿ ಸರ್ವೆ ಮಾಡಲು ಆದೇಶ ಹೊರಡಿಸಿದ್ದರು ಆದರೆ ಅದು ಆಗಿಲ್ಲ ರಾಜ್ಯದಲ್ಲಿ ಬಿಜಾಪೂರ ಹಾಗೂ ನಂತರ ಬೀದರ್‌ನಲ್ಲಿ ವಕ್ಫ ಆಸ್ತಿ ಹೆಚ್ಚಾಗಿದೆ. ಬೀದರ್ ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಯವರು ವಕ್ಫ ಆಸ್ತಿ ಕಬಳಿಸಿದ್ದಾರೆ ಎಲ್ಲವನ್ನೂ ತೆರವುಗೊಳಿಸಿ ಅಲ್ಪಸಂಖ್ಯಾತರ ಜನರ ಮಕ್ಕಳಿಗೆ ವಸತಿ ನಿಲಯ, ಆಸ್ಪತ್ರೆ ಸೇವೆ ನೀಡಿ ಎಂದು ಸಲಹೆ ನೀಡಿದರು.