ವಕ್ಫ್ ಮಂಡಳಿ ವಿರುದ್ಧ ನ. 21ರಂದು ಪ್ರತಿಭಟನೆ: ಅನಿಲ್‌ಕುಮಾರ್ ಮೋಕಾ

| Published : Nov 20 2024, 12:33 AM IST

ವಕ್ಫ್ ಮಂಡಳಿ ವಿರುದ್ಧ ನ. 21ರಂದು ಪ್ರತಿಭಟನೆ: ಅನಿಲ್‌ಕುಮಾರ್ ಮೋಕಾ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ಮಂಡಳಿಯಿಂದ ಮುಸ್ಲಿಂ ಸಮುದಾಯದ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಹೇಳಿದರು.

ಬಳ್ಳಾರಿ: ರೈತರು, ಮಠಮಾನ್ಯಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್‌ ಮಂಡಳಿಯ ನೀತಿಯನ್ನು ಖಂಡಿಸಿ ನ. 21ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ವಕ್ಫ್‌ ಮಂಡಳಿ ಬಾಧಿತ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಮನವಿ ಮಾಡಿದರು.

ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್‌ ಮಂಡಳಿಯಿಂದ ಮುಸ್ಲಿಂ ಸಮುದಾಯದ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ 65 ಆಸ್ತಿಗಳನ್ನು ವಕ್ಫ್‌ ಮಂಡಳಿಗೆ ವರ್ಗಾಯಿಸಲಾಗಿದೆ. ಅನೇಕ ರೈತರ ಪಹಣಿಗಳಲ್ಲಿ ವಕ್ಫ್‌ ಎಂದು ಬದಲಾಗಿದ್ದು, ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ಧೋರಣೆಯಿಂದ ರೈತರು ಆತಂಕದಲ್ಲಿದ್ದಾರೆ ಎಂದರು.

ವಕ್ಫ್‌ ಮಂಡಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಈ ಕಾರಣಕ್ಕಾಗಿಯೇ ಮಠಮಾನ್ಯಗಳು ಹಾಗೂ ರೈತರ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗುತ್ತಿದೆ. ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ರಾಜ್ಯ ಸಮಿತಿಯಿಂದ ಮೂರು ತಂಡಗಳನ್ನು ರಚಿಸಿ, ಪ್ರವಾಸ ಕೈಗೊಳ್ಳಲಾಗಿದೆ. ಜಿಲ್ಲಾ ಸಮಿತಿಯಿಂದಲೂ ಸಮಿತಿ ರಚಿಸಲಾಗಿದ್ದು, ವಕ್ಫ್ ಮಂಡಳಿ ಬಾಧಿತರಿಗೆ ಕಾನೂನು ನೆರವು ನೀಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲೂ ಬಿಜೆಪಿಯಿಂದ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ವಕ್ಫ್‌ ಬೋರ್ಡ್ ನಲ್ಲಿ ಸಾಕಷ್ಟು ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದ್ದು, ತನಿಖೆ ನಡೆಸಬೇಕು. ಸರ್ಕಾರ ಆಸ್ತಿಗಳನ್ನು ನುಂಗಿ ಹಾಕುವ ವಕ್ಫ್‌ ಬೋರ್ಡ್ ಹುನ್ನಾರವನ್ನು ತಡೆಯಬೇಕು ಎಂಬುದು ಪಕ್ಷದ ಆಗ್ರಹವಾಗಿದೆ ಎಂದರು.

ಪಕ್ಷದ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಪಾಟೀಲ್ ಸಿದ್ದಾರೆಡ್ಡಿ, ಪಕ್ಷದ ಹಿರಿಯ ಮುಖಂಡ ಗಾಳಿ ಶಂಕ್ರಪ್ಪ, ದೊಡ್ಡ ಹುಲುಗಪ್ಪ ಹಾಗೂ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.