ಸಾರಾಂಶ
ಗದಗ: ರಾಜ್ಯದಲ್ಲಿ ರೈತರ, ಸಾರ್ವಜನಿಕ ಹಾಗೂ ಮಠಗಳ ಉತಾರದಲ್ಲಿ ವಕ್ಫ್ ಮಂಡಳಿಯ ಹೆಸರು ಕುಳಿತಿರುವಂತೆ ಗಜೇಂದ್ರಗಡ ಸೇರಿ ತಾಲೂಕಿನ ಮೂರು ಗ್ರಾಮಗಳ ಜಮೀನುಗಳ ಆಸ್ತಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ನರೇಗಲ್‌ನ ಅನ್ನದಾನೇಶ್ವರ ಮಠದ ಆಸ್ತಿಯಲ್ಲಿ ಹಾಗೂ ಸೂಡಿ ಗ್ರಾಮದ ಸರ್ವೇ ನಂ.328/2ರ ಒಂದು ಎಕರೆ 29 ಗುಂಟೆ ಹಾಗೂ ಲಕ್ಕಲಕಟ್ಟಿ ಗ್ರಾಮದ ಸರ್ವೇ. ನಂ-88ರ 8 ಗುಂಟೆ, ರಾಜೂರ ಗ್ರಾಮದ ಸರ್ವೇ ನಂ-289ರ 3 ಎಕರೆ ಜಮೀನಿನಲ್ಲಿ 1 ಎಕರೆ 39 ಗುಂಟೆ ಜಾಗ ಹಾಗೂ ಉಣಚಗೇರಿ ಗ್ರಾಮದ ಸರ್ವೇ ನಂ. 298/3ಅ/1ರ ಉತಾರದಲ್ಲಿ 1 ಎಕರೆ 29 ಗುಂಟೆ ಜಾಗೆಯಲ್ಲಿ ಹಾಗೂ ಸರ್ವೇ ನಂ. 298/3ಅ/2ನ ಜಮೀನಿನಲ್ಲಿ 6 ಎಕರೆ 8 ಗುಂಟೆ ಜಾಗದಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ಉಲ್ಲೇಖವಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು, ಮಠ ಹಾಗೂ ಸಾರ್ವಜನಿಕ ಆಸ್ತಿಗಳಲ್ಲಿ ವಕ್ಫ್ ಎಂದು ದಾಖಲಾಗಿರುವುದು ಈಗಾಗಲೇ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ದಿನ ಕಳೆದಂತೆ ಜಿಲ್ಲೆಯ ಒಂದಿಲ್ಲೊಂದು ಗ್ರಾಮಗಳ ಆಸ್ತಿಗಳಲ್ಲಿ ವಕ್ಫ್ ಹೆಸರು ಪ್ರತ್ಯಕ್ಷವಾಗುತ್ತಿರುವುದು ಹೊಸ ಆತಂಕವನ್ನು ಹುಟ್ಟು ಹಾಕುವಂತೆ ಮಾಡಿದ್ದು, ರೈತರು ಹಾಗೂ ಸಾರ್ವಜನಿಕರು ತಮ್ಮ ಆಸ್ತಿಗಳ ದಾಖಲೆಗಳ ಪರಿಶೀಲನೆಗೆ ಮುಂದಾಗುತ್ತಿದ್ದಾರೆ.
ಕೆಲ ಆಸ್ತಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದಕ್ಕೆ ಈಗಾಗಲೇ ಕೆಲವರು ಕಾನೂನಿನ ಸಮರಕ್ಕೆ ಅಣಿಯಾಗುತ್ತಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಸಹ ಆಸ್ತಿಗಳಲ್ಲಿ ಉಲ್ಲೇಖವಾಗಿರುವ ವಕ್ಫ್ ಹೆಸರನ್ನು ತೆಗೆಯಲು ಸೂಚಿಸಿದ್ದರೂ ಜನರಲ್ಲಿ ಉಂಟಾಗಿರುವ ಆತಂಕಕ್ಕೆ ಪರಿಹಾರ ಸಿಗಬೇಕಾದರೆ ಆಸ್ತಿಯಲ್ಲಿ ಉಲ್ಲೇಖವಾಗಿರುವ ವಕ್ಫ್ ಆಸ್ತಿ ಎನ್ನುವುದು ಅನುರ್ಜಿತವಾಗಬೇಕು. ಮತ್ತೊಂದು ಸುತ್ತಿನ ಪ್ರತಿಭಟನೆಗಜೇಂದ್ರಗಡ ಸೇರಿ ರಾಜ್ಯದಲ್ಲಿ ರೈತರ, ಮಠ ಹಾಗೂ ಸಾರ್ವಜನಿಕ ಆಸ್ತಿಗಳಲ್ಲಿ ವಕ್ಫ್ ಎಂದು ನಮೂದಾಗಿದ್ದನ್ನು ತೆರವುಗೊಳಿಸಿ ಎಂದು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ತಕ್ಷಣವೇ ವಕ್ಫ್ ಆಸ್ತಿ ತೆರವುಗೊಳಿಸಲು ಮುಂದಾಗಬೇಕು. ಇಲ್ಲದಿದ್ದರೆ ಮತ್ತೊಂದು ಸುತ್ತಿನ ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ತಿಳಿಸಿದ್ದಾರೆ.ಪರಿಶೀಲಿಸಿ ಕ್ರಮ
ಗಜೇಂದ್ರಗಡ ತಾಲೂಕಿನ ಕೆಲವು ಗ್ರಾಮಗಳ ಸರ್ವೇ ನಂಬರ್‌ನಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ಪರಿಶೀಲಿಸಲಾಗುತ್ತಿದ್ದು, ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಗಜೇಂದ್ರಗಡ ತಹಸೀಲ್ದಾರ್ಕಿರಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.