ಸಾರಾಂಶ
ಯಲ್ಲಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದ ಅನಂತಕುಮಾರ ಹೆಗಡೆ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಆರೋಗ್ಯ ಮತ್ತು ಇನ್ನಿತರ ಕಾರಣಗಳಿಂದ ಹಲವು ದಿನಗಳಿಂದ ಎಲ್ಲ ವಿಚಾರಗಳಿಂದ ದೂರವಿದ್ದೆ.
ಇದಕ್ಕೆ ನಿಮ್ಮೆಲ್ಲರ ಕ್ಷಮೆ ಇರಲಿ. ಸದ್ಯ ಎಲ್ಲರ ಒತ್ತಾಸೆ ಮತ್ತು ಪಕ್ಷದ ವರಿಷ್ಠರ ಅಪ್ಪಣೆಯಂತೆ ಮತ್ತೆ ಸಂಚಾರ ಆರಂಭಿಸಿದ್ದು, ನಿಮ್ಮನ್ನೆಲ್ಲ ಪುನಃ ನೋಡಲು ಅವಕಾಶವಾಗಿರುವುದು ನನಗೆ ಸಂತಸದ ಸಂಗತಿ ಎಂದರು.
ಚುನಾವಣೆಯ ಮಹಾ ಸಂಗ್ರಾಮದ ವೇದಿಕೆ ಸಿದ್ಧವಾಗುತ್ತಿದ್ದು, ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಐತಿಹಾಸಿಕ ದಾಖಲೆಯ ಗೆಲುವಾಗಬೇಕಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅನಂತಕುಮಾರ ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಕಾರ್ಯಕ್ಕೆ ಆಮಂತ್ರಣ ನೀಡಿ, ಅಕ್ಷತೆ ವಿತರಿಸುವ ಪವಿತ್ರ ಕಾರ್ಯ ದೇಶಾದ್ಯಂತ ನಡೆಯುತ್ತಿದ್ದು, ಇದರಿಂದ ದೂರವಿರುವವರು ನತದೃಷ್ಟರೆನಿಸುತ್ತಾರೆ.
ನಾನು ಅಕ್ಷತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.ಪಟ್ಟಣದ ಕೆಲವು ಮನೆಗಳಿಗೆ ತೆರಳಿ, ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠೆ ಹಾಗೂ ಮಂದಿರ ಲೋಕಾರ್ಪಣೆಗೆ ಆಹ್ವಾನಿಸುವ ಅಕ್ಷತಾ ಅಭಿಯಾನದ ಪ್ರಯುಕ್ತ ಪಾಲ್ಗೊಂಡು ಆಹ್ವಾನ ನೀಡಿದರು.
ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಯಲ್ಲಾಪುರ ಮಂಡಲಾಧ್ಯಕ್ಷ ಜಿ.ಎನ್. ಗಾಂವ್ಕರ್, ಜನಪ್ರತಿನಿಧಿಗಳು, ಸಂಘ ಪರಿವಾರದ ಪ್ರಮುಖರು, ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.