ಸಾರಾಂಶ
ಮಳೆಗೆ ಗೋಡೆ ಕುಸಿತ: ವೃದ್ಧ ದಂಪತಿ ಪಾರು
ತಿಪಟೂರು: ಕಳೆದ ರಾತ್ರಿ ಸುರಿದ ಮಳೆಗೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಮಾಯಗೊಂಡನಹಳ್ಳಿ ಗ್ರಾಮದ ಚನ್ನಬಸಮ್ಮ ಎಂಬುವವರ ಮನೆಯ ಗೋಡೆ ಮಳೆಗೆ ಕುಸಿತಗೊಂಡರೂ ಹೆಚ್ಚಿನ ಅನಾಹುತ ತಪ್ಪಿದೆ. ಗ್ರಾಮದ ಚನ್ನಬಸಮ್ಮ ಮತ್ತು ರಾಜಣ್ಣ ವಯೋವೃದ್ದ ದಂಪತಿಗಳು ವಾಸವಿದ್ದ ಮನೆಯ ಗೋಡೆ ಕುಸಿತಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆ ನೀರಿಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಿನಸಿ ಸಾಮಾನುಗಳು ನಾಶವಾಗಿದ್ದು ಸುಮಾರು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ಇವರಿಗೆ ವಾಸಕ್ಕೆ ಬೇರೆ ಮನೆ ಇಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೃದ್ದ ದಂಪತಿಗಳಿಗೆ ಆಸರೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.