ಸಾರಾಂಶ
ಫೆಂಗಲ್ ಚಂಡಮಾರುತದ ಪರಿಣಾಮ । ಅಧಿಕಾರಿಗಳ ಭೇಟಿ
ಕನ್ನಡಪ್ರಭ ವಾರ್ತೆ ಹನೂರುತಮಿಳುನಾಡಿನಲ್ಲಿ ಬೀಸಿರುವ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದಲ್ಲೂ ಮಳೆಯಾಗುತ್ತಿದೆ. ನಿರಂಂತರ ಮಳೆಯಿಂದ ಇಲ್ಲಿಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮನೆಯ ಗೋಡೆ ಕುಸಿದಿದೆ. ಈ ವೇಳೆ ಮನೆಯ ಮೂರು ಮಂದಿ ಅದೃಷ್ಟವಶಾತ್ ಪಾರಾಗಿರುವ ಘಟನೆ ಸೋಮವಾರ ಬೆಳಗ್ಗೆ ಜರುಗಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಂಬಡಗೆರೆ ಮಾರಿಗುಡಿ ಮುಂಭಾಗ ಪುಟ್ಟಸ್ವಾಮಿ ಮತ್ತು ರಾಜೇಶ್ವರಿ ದಂಪತಿಯ ಮನೆಯ ಒಂದು ಭಾಗದ ಗೋಡೆ ಕುಸಿದು ಮನೆಯಲ್ಲಿದ್ದ ಪುಟ್ಟಸ್ವಾಮಿ ಅವರ ಸಹೋದರಿ ಸಾಕಮ್ಮ ಹಾಗೂ ಅವರ ಮಕ್ಕಳಾದ ಮಹದೇವ ಪ್ರಸಾದ್, ಹೇಮಂತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರೆ.ಸೈಕ್ಲೋನ್ ಎಫೆಕ್ಟ್ ಮನೆ ಗೋಡೆ ಕುಸಿತ:
ಕಳೆದ ಎರಡು ದಿನಗಳಿಂದ ಫೆಂಗಲ್ ಸೈಕ್ಲೋನ್ ಎಫೆಕ್ಟ್‌ನಿಂದ ನಿರಂತರವಾಗಿ ಬೀಳುತ್ತಿರುವ ಜಿಟಿಜಿಟಿ ಮಳೆಯಿಂದ ಮಲೆ ಮಾದೇಶ್ವರ ಬೆಟ್ಟದಲ್ಲಿ ಮನೆಯ ಗೋಡೆ ನೆನೆದು ಸೋಮವಾರ ಬೆಳಿಗ್ಗೆ 9ರ ಸಮಯದಲ್ಲಿ ಒಂದು ಭಾಗದ ಗೋಡೆ ಹೊರ ಭಾಗಕ್ಕೆ ಬಿದ್ದಿರುವುದರಿಂದ ಮನೆಯಲ್ಲಿದ್ದ ಮೂವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಕಲ್ನಾರ್ ಶೀಟ್ ಮನೆಯಾಗಿರುವುದರಿಂದ ಮನೆಯ ಒಂದು ಭಾಗದ ಗೋಡೆ ಕುಸಿದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.ಅಧಿಕಾರಿಗಳ ಭೇಟಿ: ಮನೆಯ ಗೋಡೆ ಕುಸಿತಗೊಂಡ ಸುದ್ದಿ ತಿಳಿದ ತಕ್ಷಣ ಮಲೆಮಾದೇಶ್ವರ ಬೆಟ್ಟದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್ ಹಾಗೂ ಗ್ರಾಮ ಸೇವಕ ಮಾದೇಶ್ ಘಟನೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಈ ಬಗ್ಗೆ ವರದಿಯನ್ನು ತಾಲೂಕು ದಂಡಾಧಿಕಾರಿಗಳಿಗೆ ಕಳಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಪರಿಹಾರಕ್ಕೆ ಒತ್ತಾಯ:ನಿರಂತರವಾಗಿ ಬೀಳುತ್ತಿರುವ ಜಿಟಿಜಿಟಿ ಮಳೆಯಿಂದ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದ ಕೆಲವು ಪದಾರ್ಥಗಳು, ಪಾತ್ರೆಗಳು ಹಾಳಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಉಂಟಾಗಿರುವ ಮನೆಯ ಮಾಲೀಕರಿಗೆ ಹೆಚ್ಚಿನ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನೆಯ ಮಾಲೀಕ ಪುಟ್ಟಸ್ವಾಮಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.