ವಕ್ಫ್ ಕಾಯ್ದೆ ತಿದ್ದುಪಡಿ: ಬಂಟ್ವಾಳ ಮುಸ್ಲಿಂ ಸಮಾಜ ಪ್ರತಿಭಟನೆ

| Published : Apr 28 2025, 12:48 AM IST

ವಕ್ಫ್ ಕಾಯ್ದೆ ತಿದ್ದುಪಡಿ: ಬಂಟ್ವಾಳ ಮುಸ್ಲಿಂ ಸಮಾಜ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಬಂಟ್ವಾಳ ಮುಸ್ಲಿಂ ಸಮಾಜ ಸಂಘಟನೆಯು ಬಂಟ್ವಾಳ ತಾಲೂಕು ಆಡಳಿತ ಸೌಧ ಮುಂಭಾಗ ಬುಧವಾರ ದಿನವಿಡೀ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಬಂಟ್ವಾಳ ಮುಸ್ಲಿಂ ಸಮಾಜ ಸಂಘಟನೆಯು ಬಂಟ್ವಾಳ ತಾಲೂಕು ಆಡಳಿತ ಸೌಧ ಮುಂಭಾಗ ಬುಧವಾರ ದಿನವಿಡೀ ಪ್ರತಿಭಟನೆ ನಡೆಸಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಲೂಕು ಮುಸ್ಲಿಂ ಸಮಾಜ ಅಧ್ಯಕ್ಷ ಕೆ.ಎಚ್.ಅಬೂಬಕ್ಕರ್, ನಾವು ಯಾವ ಧರ್ಮದ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ, ನಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಾಗಿದೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮಾಜ ಕೈಗೊಂಡಿರುವ ಪ್ರತಿಭಟನೆಗೆ ಕಾಂಗ್ರೆಸ್ ಪರವಾಗಿ ಬಂದಿದ್ದೇನೆ. ಮುಸ್ಲಿಂ ಸಮಾಜಕ್ಕೆ ಅನ್ಯಾಯವಾದಾಗ ಸಮಾಜದ ಪರ ನಿಲ್ಲುವುದು ತುಷ್ಟೀಕರಣವಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಎಲ್ಲರನ್ನೂ ಸಮಾನರನ್ನಾಗಿ ಕಂಡಿದ್ದೇವೆ ಎಂದರು.

ಮುಖಂಡ ರಫೀಯುದ್ದೀನ್ ಕುದ್ರೋಳಿ ಮಾತನಾಡಿ, ದೇಶದಲ್ಲಿ ಮುಸ್ಲಿಂ ಮತ್ತು ಹಿಂದುಗಳು ಜತೆಯಾಗಿ ಬಾಳ್ವೆ ಸಾಗಿಸುತ್ತಿದ್ದು, ಇದು ಸಂಬಂಧ ಬೇರ್ಪಡಿಸುವ ಕೃತ್ಯವಾಗಿದೆ ಎಂದರು.

ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡವನ್ನು ವಿರೋಧಿಸಲಾಯಿತು. ಬಳಿಕ ಮೃತರ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಮುಖಂಡರು, ಕಾಶ್ಮೀರದಲ್ಲಿ ನಡೆದ ಮಾನವಹತ್ಯೆಯನ್ನು ಖಂಡಿಸಿ, ಈ ಘಟನೆಗೆ ಕಾರಣರಾದವರಿಗೆ ಉಗ್ರ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಅಮಾನುಲ್ಲಾ ಮಾಸ್ಟರ್, ಮಂಗಳೂರು ಮಾಜಿ ಮೇಯರ್ ಅಶ್ರಫ್, ಅಶ್ರಫ್ ಬದ್ರಿಯಾ, ಮುಸ್ಲಿಂ ಸಮಾಜ ಗೌರವಾಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್, ಸಿರಾಜ್, ಅಬ್ಬಾಸ್ ಆಲಿ ಬೋಳಂತೂರು , ಎಂ.ಎಸ್.ಮಹಮ್ಮದ್, ಜಾಫರ್ ಫೈಜಿ, ಪಿ.ಎ.ರಹೀಂ, ಇಬ್ರಾಹಿಂ ಕೈಲಾರ್, ಶಾಹುಲ್ ಎಚ್.ಎಸ್., ಪಾಣೆಮಂಗಳುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬೇಬಿ ಕುಂದರ್, ಪಿಯೂಸ್ ಎಲ್ ರೋಡ್ರಿಗಸ್ ಸಹಿತ ಮುಸ್ಲಿಂ ಸಮಾಜದ ಹಾಗೂ ಇತರ ಸಮಾಜದ ಧಾರ್ಮಿಕ, ಸಾಮಾಜಿಕ ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ಐಎಂಆರ್ ಇಕ್ಬಾಲ್ ಸ್ವಾಗತಿಸಿದರು.