ವಕ್ಫ್ ಕಾನೂನೇ ಅಸಂವಿಧಾನಿಕ: ರಮೇಶ್‌ರಾಜು ಆರೋಪ

| Published : Nov 05 2024, 12:49 AM IST

ಸಾರಾಂಶ

ರಾಜ್ಯದ ವಿಜಯಪುರ, ಧಾರವಾಡ, ಹಾವೇರಿ, ಬೀದರ್, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳ ರೈತರ ಜಮೀನುಗಳ ಆರ್‌ಟಿಸಿ ಕಲಂ ೧೧ರಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಗೊಂಡು ದೊಡ್ಡ ಅವಾಂತರ, ಗೊಂದಲವನ್ನು ಸೃಷ್ಟಿಸಿದೆ. ಇದರಿಂದ ರೈತರು ಹಾಗೂ ಸಾಮಾನ್ಯ ಜನರು ಆತಂಕಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾನೂನು ಅಸಂವಿಧಾನಿಕ ಮತ್ತು ಅಪಾಯಕಾರಿಯಾಗಿದೆ. ಇದನ್ನು ರದ್ದುಗೊಳಿಸುವುದಕ್ಕೆ ದೇಶದ ಹಿಂದೂ ಸಮುದಾಯದವರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ತಿಳಿಸಿದರು.

ರಾಜ್ಯದ ವಿಜಯಪುರ, ಧಾರವಾಡ, ಹಾವೇರಿ, ಬೀದರ್, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳ ರೈತರ ಜಮೀನುಗಳ ಆರ್‌ಟಿಸಿ ಕಲಂ ೧೧ರಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಗೊಂಡು ದೊಡ್ಡ ಅವಾಂತರ, ಗೊಂದಲವನ್ನು ಸೃಷ್ಟಿಸಿದೆ. ಇದರಿಂದ ರೈತರು ಹಾಗೂ ಸಾಮಾನ್ಯ ಜನರು ಆತಂಕಗೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತು ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ತಕ್ಷಣವೇ ರಾಜ್ಯದ ಯಾವುದೇ ರೈತರ ಆಸ್ತಿಗಳ ಮೇಲೆ ವಕ್ಫ್ ಹಾಗೂ ಇತರೆ ಸಂಸ್ಥೆಗ ಹೆಸರು ಬರದಂತೆ ನೋಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತುರ್ತು ಸಂದೇಶ ರವಾನಿಸುವಂತೆ ಆಗ್ರಹಪಡಿಸಿದರು.

೧೯೫೪ರಲ್ಲಿ ಸಂಸತ್ತಿನ ಅಂಗೀಕಾರ ಪಡೆದು ೧೯೯೫ ಹಾಗೂ ೨೦೧೩ರಲ್ಲಿ ತಿದ್ದುಪಡಿಗೊಂಡಿರುವ ವಕ್ಫ್ ಕಾಯಿದೆ ಸಾಕಷ್ಟು ಬಲಶಾಲಿಯಾಗಿದೆ. ವಕ್ಫ್ ನ್ಯಾಯ ಮಂಡಳಿ ಯಾವುದೇ ಆಸ್ತಿಯನ್ನು ತನ್ನದೆಂದು ಘೋಷಿಸುವುದಾದರೆ ಭಾರತ ಅಳವಡಿಸಿಕೊಂಡಿರುವ ಸಂವಿಧಾನಕ್ಕೆ ಬೆಲೆ ಎಲ್ಲಿದೆ, ಸ್ವತಂತ್ರ ಭಾರತದ ಅರ್ಥವೇನು, ನ್ಯಾಯಾಂಗಕ್ಕೆ ಇರುವ ಗೌರವವಾದರೂ ಏನು ಎಂದು ಪ್ರಶ್ನಿಸಿದರು.

ಪ್ರತಿ ಸಮಸ್ಯೆಗೆ ದೇಶದ ನಾಗರಿಕ ನ್ಯಾಯಾಂಗಕ್ಕೆ ಹೋಗುವುದು ಸಹಜ. ಆದರೆ, ವಕ್ಫ್ ಮಂಡಳಿ ರೈತರಿಗೆ ಹೇಗೆ ನೋಟಿಸ್ ನೀಡಿತು. ರೈತರು ನ್ಯಾಯಾಲಯ ಬಿಟ್ಟು ವಕ್ಫ್ ಮಂಡಳಿಗೆ ಹೋಗಿ ನ್ಯಾಯ ನಿರೀಕ್ಷಿಸಲು ಸಾಧ್ಯವೇ. ಅಷ್ಟಕ್ಕೂ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಯಾರೂ ಇಲ್ಲ. ವಕ್ಫ್ ನ್ಯಾಯ ಮಂಡಳಿ ನೀಡುವ ತೀರ್ಮಾನವೇ ಅಂತಿಮ ಎಂದಿದೆ. ಇಂತಹ ವಿಚಿತ್ರ ಕಾನೂನು ವಿಶ್ವದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕಟುವಾಗಿ ನುಡಿದರು.

ಸರ್ಕಾರ ಈ ವಿಚಾರ ಮಂಡಿಸಲು ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ಕಿಸಾನ್ ಸಂಘವು ರಾಜ್ಯದ ಮತ್ತು ಜಿಲ್ಲೆಯ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಎಲ್ಲಾ ಸಂಘಟನೆಗಳ ಮುಖಂಡರ ಸಭೆ ಕರೆದು ಚರ್ಚಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಬಿ.ಪಿ.ಅಪ್ಪಾಜಿ, ಪುಟ್ಟಮ್ಮ, ದುರ್ಗೇಶ್, ರಾಘವೇಂದ್ರ, ಪಾಪೇಗೌಡ, ಜಯರಾಂ, ರುದ್ರಪ್ಪ, ಬಸವರಾಜು ಇದ್ದರು.