ಕೋಮುದ್ವೇಷ ಮುಂದುವರಿದ ಭಾಗವೇ ವಕ್ಫ್‌ ತಿದ್ದುಪಡಿ

| Published : Mar 25 2025, 12:45 AM IST

ಕೋಮುದ್ವೇಷ ಮುಂದುವರಿದ ಭಾಗವೇ ವಕ್ಫ್‌ ತಿದ್ದುಪಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೋಮುದ್ವೇಷದ ಮುಂದುವರಿದ ಭಾಗವಾಗಿ ಇದೀಗ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ಹೇಳಿದ್ದಾರೆ.

- ಸಂಘಟಿತ ಹೋರಾಟದಿಂದ ಮಸೂದೆ ಜಾರಿ ವಿರೋಧಿಸಿ: ರಂಜಾನ್ ಕಡಿವಾಳ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕೋಮುದ್ವೇಷದ ಮುಂದುವರಿದ ಭಾಗವಾಗಿ ಇದೀಗ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ಹೇಳಿದರು.

ನಗರದ ಎಚ್‌ಕೆಜಿಎನ್‌ ಶಾದಿ ಮಹಲ್‌ನಲ್ಲಿ ಸೋಮವಾರ ರಂಜಾನ್ ಹಬ್ಬದ ಅಂಗವಾಗಿ ಎಸ್‌ಡಿಪಿಐ ಹಮ್ಮಿಕೊಂಡಿದ್ದ ಇಫ್ತಾರ್ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಘಟಿತ ಹೋರಾಟದ ಮೂಲಕ ವಿರೋಧಿಸಬೇಕಾಗಿದೆ ಎಂದರು.

ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮೀಯರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸಂವಿಧಾನದಲ್ಲಿ ಧಾರ್ಮಿಕ ಹಕ್ಕುಗಳ ಅನುಸಾರ ಅವಕಾಶ ನೀಡಲಾಗಿದೆ. ಅದರಂತೆಯೇ ಇಲ್ಲಿನ ಮುಸ್ಲಿಮರು ತಮ್ಮ ಧಾರ್ಮಿಕ ಆಚಾರ, ವಿಚಾರಗಳನ್ನು ಅನುಸರಣೆ ಮಾಡುತ್ತಾರೆ. ಆದರೆ, ಒಕ್ಕೂಟ ಸರ್ಕಾರವು ಮುಸ್ಲಿಂ ಸಮುದಾಯದ ವಿರೋಧದ ಮಧ್ಯೆಯೂ ಹಠಕ್ಕೆ ಬಿದ್ದು, ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮರ ಸಂವಿಧಾನಿಕ ಮತ್ತು ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸುವ ಹುನ್ನಾರವು ವಕ್ಫ್ ತಿದ್ದುಪಡಿ ಮಸೂದೆ-2024ನಲ್ಲಿ ಅಡಗಿದೆ. ವಕ್ಫ್ ಆಸ್ತಿಗಳು ಮುಸ್ಲಿಂ ಸಮಾಜದ ಉಳ್ಳವರು, ಸಮಾಜದಲ್ಲಿರುವ ಬಡವರು, ನಿರ್ಗತಿಕರಿಗಾಗಿ ಸಹಾಯ ಮಾಡಲಿಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿಯಾಗಿದೆ. ಇಂತಹ ಆಸ್ತಿ ರಕ್ಷಣೆಗಾಗಿ ಸಂಘಟಿತ ಹೋರಾಟ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2024ರಲ್ಲಿ ಇರುವಂತಹ ಮಾರಕ ಅಂಶಗಳು ಯಾವುವು, ಇದರ ಹಿಂದೆ ಅಡಗಿರುವ ಷಡ್ಯಂತ್ರ ಏನು, ಇದನ್ನು ವಿರೋಧಿಸುವ ವಿಧಾನ ಹೇಗೆ, ಮಸೂದೆಯನ್ನು ತಿರಸ್ಕಾರ ಮಾಡಲು ಮುಸ್ಲಿಂ ಸಮುದಾಯದ ಮುಂದಿರುವ ಮಾರ್ಗೋಪಾಯಗಳು ಯಾವುವು ಎಂಬ ಬಗ್ಗೆಯೂ ರಂಜಾನ್ ಕಡಿವಾಳ ಮತ್ತಿತರರು ಇದೇ ವೇಳೆ ಚರ್ಚಿಸಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಎ.ಆರ್.ತಾಹೀರ್‌, ಕಾರ್ಯದರ್ಶಿ ಮಹಮ್ಮದ್ ಮೊಹಸೀನ್‌, ಮೊಹಮ್ಮದ್ ಜುನೈದ್, ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಸೈಯದ್ ರೆಹಮಾನ್ ಸಾಬ್‌, ಇಸ್ಮಾಯಿಲ್ ಜಬೀವುಲ್ಲಾ, ಶೋಯಬ್‌, ದಕ್ಷಿಣ ಅಧ್ಯಕ್ಷ ಏಜಾಜ್ ಅಹಮ್ಮದ್, ಹರಿಹರ ಅಧ್ಯಕ್ಷ ಸಮೀಮುಲ್ಲಾ, ಕೆಪಿಸಿಸಿ ಕಾರ್ಯದರ್ಶಿ, ವಕೀಲ ಇಬ್ರಾಹಿಂ ಖಲೀಲುಲ್ಲಾ, ಎಐಎಂಐಎಂ ಪಕ್ಷದ ಮುಖಂಡ ಮೊಹಮ್ಮದ್ ಅಲಿ ಶೋಯಿಬ್, ಅಜ್ಮತ್ ಪಾಷಾ, ಆಮ್ ಆದ್ಮಿ ಪಕ್ಷದ ಆದಿಲ್ ಖಾನ್‌, ಮುಸ್ಲಿಂ ಒಕ್ಕೂಟದ ಟಿ.ಅಜ್ಗರ್, ಎಂಸಿಟಿ ಗ್ರೂಪ್‌ನ ಮನ್ಸೂರ್ ಅಲಿ, ಮುಸ್ಲಿಂ ಧರ್ಮ ಗುರುಗಳು, ಮುಸ್ಲಿಂ ಧರ್ಮೀಯರು ಇದ್ದರು.

- - - -24ಕೆಡಿವಿಜಿ1.ಜೆಪಿಜಿ: ದಾವಣಗೆರೆಯಲ್ಲಿ ಎಸ್‌ಡಿಪಿಐ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ಮಾತನಾಡಿದರು. -24ಕೆಡಿವಿಜಿ2.ಜೆಪಿಜಿ: ದಾವಣಗೆರೆಯಲ್ಲಿ ಎಸ್‌ಡಿಪಿಐ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ವಿವಿಧ ಪಕ್ಷಗಳು, ಮುಸ್ಲಿಂ ಸಮಾಜದ ಮುಖಂಡರು, ಸಮಾಜ ಬಾಂಧವರು ಪಾಲ್ಗೊಂಡರು.