ಸಾರಾಂಶ
ಮಿಶ್ರಿಕೋಟೆ ಗ್ರಾಮದಲ್ಲಿರುವ ರುದ್ರಭೂಮಿ, ಸರ್ಕಾರಿ ಶಾಲೆ, ಚಾಂಗದೇವ ಬಾಬಾ ದೇವಾಲಯ, ಗರಡಿ ಮನೆಗಳು, ಸಹಕಾರಿ ಸಂಘದ ಆಸ್ತಿ ಒಳಗೊಂಡಂತೆ 140 ಎಕರೆ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದೆ.
ಹುಬ್ಬಳ್ಳಿ:
ರೈತರ ಭೂಮಿ, ಮಠಮಾನ್ಯಗಳ ಹಾಗೂ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಅಕ್ರಮದ ವಿರುದ್ಧದ ಬೃಹತ್ ಆಂದೋಲನದ ಭಾಗವಾಗಿ ನೈಜ ವರದಿ ಸಂಗ್ರಹಿಸಲು ರಾಜ್ಯ ಬಿಜೆಪಿ ರಚಿಸಿದ 3 ತಂಡಗಳಲ್ಲಿ ವಿಪ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡವು ಬುಧವಾರ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮಕ್ಕೆ ಭೇಟಿ ನೀಡಿ ರೈತರ, ಸಾರ್ವಜನಿಕರ ಅಹವಾಲು ಸ್ವೀಕರಿಸಿತು.ಈ ವೇಳೆ ಹಲವು ರೈತರು, ಸಾರ್ವಜನಿಕರು ಅಹವಾಲು ಸಲ್ಲಿಸಿ, ಗ್ರಾಮದಲ್ಲಿರುವ ರುದ್ರಭೂಮಿ, ಸರ್ಕಾರಿ ಶಾಲೆ, ಚಾಂಗದೇವ ಬಾಬಾ ದೇವಾಲಯ, ಗರಡಿ ಮನೆಗಳು, ಸಹಕಾರಿ ಸಂಘದ ಆಸ್ತಿ ಒಳಗೊಂಡಂತೆ 140 ಎಕರೆ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದೆ. ಒಂದು ವೇಳೆ ನಮ್ಮ ಭೂಮಿ ಕಸಿದುಕೊಂಡರೆ ನಾವೆಲ್ಲ ಕುಟುಂಬ ಸಮೇತರಾಗಿ ಬೀದಿಗೆ ಬೀಳುವ ಆತಂಕ ಎದುರಾಗಿದೆ. ನಮಗೆ ನ್ಯಾಯ ಕೊಡಿಸುವಂತೆ ಅಳಲು ತೋಡಿಕೊಂಡರು.
ನಿಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿಯೇ ನಾವು ಇಲ್ಲಿಗೆ ಭೇಟಿ ನೀಡಿದ್ದು, ಯಾರು ಭಯಪಡುವ ಅವಶ್ಯಕತೆಯಿಲ್ಲ. ನಿಮಗೆ ನ್ಯಾಯಕೊಡಿಸುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಗ್ರಾಮಸ್ಥರಲ್ಲಿ ಭರವಸೆ ನೀಡಿದರು.ಈ ವೇಳೆ ವಿಪ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ವಿಪ ಸದಸ್ಯ ಸಿ.ಟಿ. ರವಿ, ಮಾಜಿ ಸಂಸದ ನಳೀನ ಕುಮಾರ್ ಕಟೀಲ್, ಎಸ್. ಮುನಿಸ್ವಾಮಿ, ಮಾಜಿ ಸಚಿವರಾದ ಬಿ.ಸಿ. ಪಾಟೀಲ, ಶಂಕರ ಪಾಟೀಲ ಮುನೆನಕೊಪ್ಪ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ವಕೀಲರಾದ ವಿವೇಕ ಸುಬ್ಬಾರೆಡ್ಡಿ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.