ವಕ್ಫ್‌ ಗೊಂದಲ: ಅಥಣಿ ರೈತರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಿ:ಸಂಪತ್ ಕುಮಾರ್ ಶೆಟ್ಟಿ

| Published : Oct 30 2024, 01:39 AM IST

ವಕ್ಫ್‌ ಗೊಂದಲ: ಅಥಣಿ ರೈತರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಿ:ಸಂಪತ್ ಕುಮಾರ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ವಿಜಯಪುರ ಜಿಲ್ಲೆಯ ಹೊನವಾಡ ಮತ್ತು ಇನ್ನಿತರ ಗ್ರಾಮಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಅನೇಕ ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿ ಪತ್ರದಲ್ಲಿ ನಮೂದಾಗಿರುವುದು ಭಾರೀ ಗೊಂದಲ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಅಥಣಿ

ನೆರೆಯ ವಿಜಯಪುರ ಜಿಲ್ಲೆಯ ಹೊನವಾಡ ಮತ್ತು ಇನ್ನಿತರ ಗ್ರಾಮಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಅನೇಕ ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿ ಪತ್ರದಲ್ಲಿ ನಮೂದಾಗಿರುವುದು ಭಾರೀ ಗೊಂದಲ ಸೃಷ್ಟಿಸಿದೆ. ಇಂತಹ ಗೊಂದಲ ಅಥಣಿ ತಾಲೂಕಿನಲ್ಲಿ ಸೃಷ್ಟಿಯಾಗದಂತೆ ತಾಲೂಕು ಕಂದಾಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ಸಂಪತ್ ಕುಮಾರ್ ಶೆಟ್ಟಿ ಆಗ್ರಹಿಸಿದರು.

ಮಂಗಳವಾರ ತಹಸೀಲ್ದಾರ್ ಅವರಿಗೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಅಥಣಿ ತಾಲೂಕಿನಲ್ಲಿ ಇರುವ ವಕ್ಫ್‌ ಆಸ್ತಿ ವಿವರವನ್ನು ಒದಗಿಸುವಂತೆ ಅರ್ಜಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಅಧಿಕಾರಿಗಳು ಸುಮಾರು 1500 ಎಕರೆಯಷ್ಟು ರೈತರ ಜಮೀನು ವಕ್ಫ್‌ ಆಸ್ತಿ ಎಂದು ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದ ಅನೇಕ ರೈತರಿಗೆ ಅನ್ಯಾಯವಾಗಿದ್ದು, ಇಡೀ ರಾಜ್ಯದಲ್ಲಿ ಗೊಂದಲ ಸೃಷ್ಟಿಸಿದೆ. ಹೀಗಾಗಿ ಎಲ್ಲೆಡೆ ರೈತರು ಮತ್ತು ನಾಗರಿಕರು ಆತಂಕಗೊಂಡು ತಮ್ಮ ಜಮೀನಗಳ ಪಹಣಿ ಪತ್ರಿಕೆಗಳನ್ನು ಪರಿಶೀಲನೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತಾಲೂಕ ಆಡಳಿತ ಈ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ತಾಲೂಕಿನ ಯಾವುದೇ ರೈತರಿಗೆ ಮತ್ತು ನಾಗರಿಕರಿಗೆ ಅನ್ಯಾಯಮಗದಂತೆ ನಿಗಾ ವಹಿಸಬೇಕು ಎಂದು ತಾಲೂಕಾಡಳಿತವನ್ನು ಆಗ್ರಹಿಸಿದರು.ಸಿದ್ಧರಾಜ ಬೋರಾಡಿ, ಸಿದ್ದು ಪಾಟೀಲ, ಸಂಜೀವ ಕಾಳಗಿ, ಅಭಯ ಸಗರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.