ಸಾರಾಂಶ
ರಾಜ್ಯದಲ್ಲಿನ ಮಠ, ಮಂದಿರಗಳು ಮತ್ತು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗುತ್ತಿದ್ದು, 1974ರಲ್ಲಿನ ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು ಮತ್ತು ವಕ್ಫ್ ಮಂಡಳಿಗೆ ನೀಡಿರುವ ಅಪರಿಮಿತ ಅಧಿಕಾರವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎಂ.ಕೆ. ಯೋಗೇಶ್ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ರಾಜ್ಯದಲ್ಲಿನ ಮಠ, ಮಂದಿರಗಳು ಮತ್ತು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗುತ್ತಿದ್ದು, 1974ರಲ್ಲಿನ ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು ಮತ್ತು ವಕ್ಫ್ ಮಂಡಳಿಗೆ ನೀಡಿರುವ ಅಪರಿಮಿತ ಅಧಿಕಾರವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎಂ.ಕೆ. ಯೋಗೇಶ್ ಆಗ್ರಹಿಸಿದರು. ಸೋಮವಾರ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ತಾಲೂಕು ಕಚೇರಿಗೆ ತೆರಳಿ, ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರ ಭೂಮಿ ವಶಪಡಿಸಿಕೊಳ್ಳಲು ಷಡ್ಯಂತ್ರ ರೂಪಿಸಿದೆ. ಇದು ಲ್ಯಾಂಡ್ ಜಿಹಾದ್ ಆಗಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಭೂಮಿಯ ಆರ್‌ಟಿಸಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಇದರಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಜನತೆಯ ನೆಮ್ಮದಿಯನ್ನು ಹದಗೆಡವಲು ಹವಣಿಸುತ್ತಿದೆ ಎಂದು ಆರೋಪಿಸಿದರು. ರೈತರಿಗೆ ನೀಡಿರುವ ನೋಟಿಸ್ ಹಿಂಪಡೆದರೆ ಸಾಲದು, ಆರ್‌ಟಿಸಿಯಲ್ಲಿ ವಕ್ಫ್ ಎಂದು ನಮೂದು ಮಾಡಿರುವುದು ತಗೆದು ಹಾಕಬೇಕು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯ ಸರ್ಕಾರ ತಡೆಯಬೇಕು. ತುಷ್ಟೀಕರಣ ರಾಜಕಾರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೈ ಬಿಡಬೇಕು. ಈಗಾಗಲೇ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯದಾದ್ಯಂತ ಆಂದೋಲನ ನಡೆಸಿ, ಜನರಿಗೆ ಅರಿವು ಮೂಡಿಸುವ ಜತೆಗೆ ರೈತರ ಪರವಾಗಿ ಧ್ವನಿ ಎತ್ತಲಾಗಿದೆ ಎಂದರು. ರಾಜ್ಯದಲ್ಲಿ ವಕ್ಫ್ ಆಸ್ತಿ ಎಂದು ರೈತರ ಆಸ್ತಿ, ದೇವಸ್ಥಾನಗಳ ಆಸ್ತಿಯನ್ನು ನಮೂದು ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ. ತಾಲೂಕಿನಲ್ಲಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡಬಾರದು. ನಮೂದು ಮಾಡಿದ್ದಲ್ಲಿ ಅಂತಹವುಗಳನ್ನು ರದ್ದು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಮಾಜಿ ಸದಸ್ಯ ಪಾಣಿ ರಾಜಪ್ಪ, ಟೌನ್ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ಹಿರೇಶಕುನ, ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೈ.ಜಿ. ಗುರುಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ದಾನಶೇಖರ ಗೌಡ, ಪ್ರಮುಖರಾದ ಶಿವಕುಮಾರ ಗುಂಜನೂರು, ಬಸವರಾಜ ಪಾಟೀಲ್, ರಾಮಚಂದ್ರ ಉಳವಿ ಸೇರಿದಂತೆ ಇತರರಿದ್ದರು.