ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ವಕ್ಫ್ ಆಸ್ತಿ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ತಾತ, ಮುತ್ತಾತರಿಂದ ಬಂದಿರುವ ಆಸ್ತಿಗಳ ಕಾಲಂ11ರಲ್ಲಿ ವಕ್ಫ್ ಹೆಸರು ಬಂದಿವೆ. ಹೀಗಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಬಬಲೇಶ್ವರ ಕ್ಷೇತ್ರದಲ್ಲಿ ನೋಟಿಸ್ ಕೊಡಲಾಗಿದೆ. ವಕ್ಫ್ ಆಸ್ತಿಗೂ ರೈತರಿಗೆ ಸಂಬಂಧವೇ ಇಲ್ಲ. ಇಲ್ಲದಿದ್ದರೂ 12 ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ರೈತರ ಪಹಣಿಯಲ್ಲಿ ಒಂದು ಬಾರಿ ವಕ್ಫ್ ಬೋರ್ಡ್ ಅಂತ ಹೆಸರು ಸೇರ್ಪಡೆಯಾದರೆ ಅದನ್ನು ಸರಿಪಡಿಸಲು ಜಿಲ್ಲಾಧಿಕಾರಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ಯಾರಿಗೂ ಇದರ ಅಧಿಕಾರವೇ ಇಟ್ಟಿಲ್ಲ ಎಂದರು.ಎಲ್ಲರೂ ವಕ್ಫ್ ಟ್ರಿಬ್ಯೂನಲ್‌ನಲ್ಲೇ ಹೋಗಿ ನ್ಯಾಯಕ್ಕಾಗಿ ನಿಲ್ಲಬೇಕು. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಸೇರಿಸುವ ಹುನ್ನಾರವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ನಾವು ಜಿಲ್ಲಾ ಮಟ್ಟದಿಂದ ರಾಜ್ಯಪಾಲರು, ಅಲ್ಲಿಂದ ರಾಷ್ಟ್ರಪತಿಗಳವರೆಗೆ ಪಾದಯಾತ್ರೆ ನಡೆಸಿ ಹೋರಾಟ ಮಾಡಲಾಗುವುದು. ಇಂತಹ ಸಮಯದಲ್ಲಿ ಏಕಾಏಕಿ ರೈತರ ಜಮೀನುಗಳನ್ನು ವಕ್ಫ್ ಅಂತ ಸೇರ್ಪಡೆ ಮಾಡುವುದರಿಂದ ರೈತರು ತಮ್ಮ ಕುಟುಂಬಗಳ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇವಲ ಬಡ ರೈತರ ಜಮೀನುಗಳು ಮಾತ್ರ ವಕ್ಫ್‌ಗೆ ಸೇರ್ಪಡೆಯಾಗುತ್ತಿವೆ. ರಾಜಕಾರಣಿಗಳ ಆಸ್ತಿಗಳು ಏಕೆ ಸೇರ್ಪಡೆಯಾಗುತ್ತಿಲ್ಲ?. ಇನ್ನು ವಕ್ಫ್ ವಿಚಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಕಮೀಟಿ ಮಾಡಿದ್ದೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಅವರು ಟಾಸ್ಕ್ ಫೋರ್ಸ್ ಕಮಿಟಿ ಮಾಡುವ ಅವಶ್ಯಕತೆಯಿಲ್ಲ. ಇದರಿಂದ ಸಮಯ ಮುಂದಕ್ಕೆ ಹಾಕಲಾಗುತ್ತದೆ. ಇನ್ನು ಅನ್ಯಾಯಕ್ಕೊಳಗಾದ ರೈತರ ಸಲುವಾಗಿ ನಾನು ಇಬ್ಬರು ವಕೀಲರನ್ನು ಇಟ್ಟುಕೊಂಡು ನೋಟಿಸ್ ಬಂದ ರೈತರಿಗೆ ಉಚಿತವಾಗಿ ನ್ಯಾಯ ಕೊಡಿಸಲು ಸಹಕರಿಸುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಬಲೇಶ್ವರ ಮಂಡಲ ಅಧ್ಯಕ್ಷ ಸಂತೋಷ ಕುರದಡ್ಡಿ, ಬಸವರಾಜ ಬಿರಾದಾರ, ವಿಜಯ ಜೋಶಿ ಸೇರಿದಂತೆ ಹೊನವಾಡ ಗ್ರಾಮಸ್ಥರು ಉಪಸ್ಥಿತರಿದ್ದರು.
---------ಕೋಟ್
ವಕ್ಫ್ ಆಸ್ತಿಗಳ ಬಗ್ಗೆ ಇಷ್ಟು ದೊಡ್ಡ ವಿವಾದ ಗೊತ್ತಿದ್ದರೂ ಉಸ್ತುವಾರಿ ಸಚಿವರೇ ನೀವು ಸುಮ್ಮನೆ ಕುಳಿತಿದ್ದೀರಿ. ರೈತರ ಗೋಳನ್ನು, ರೈತರ ಕಣ್ಣೀರನ್ನು ಯಾರು ಒರೆಸುವವರು? ಏನೋ ಒಂದು ಹೇಳಿ ಸುಳ್ಳು ಸಂದೇಶ ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯಬೇಡಿ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಸೇರಿಸುವ ಹುನ್ನಾರವನ್ನು ಕೂಡಲೇ ಕೈಬಿಡಬೇಕು.ವಿಜುಗೌಡ ಪಾಟೀಲ್, ಬಿಜೆಪಿ ಮುಖಂಡ