ವಕ್ಫ್‌ ಆಸ್ತಿ ವಿವಾದ: ಉಡುಪಿ ಬಿಜೆಪಿ ಪಾದಯಾತ್ರೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

| Published : Nov 06 2024, 11:50 PM IST

ವಕ್ಫ್‌ ಆಸ್ತಿ ವಿವಾದ: ಉಡುಪಿ ಬಿಜೆಪಿ ಪಾದಯಾತ್ರೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ಹರಗಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಪಾದಯಾತ್ರೆ ಮಾಡಿದ ಜಿಲ್ಲಾ ಬಿಜೆಪಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಕ್ಫ್‌ ಹರಗಣದ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದು ಸಮಾಜ ಎಂಬ ಜೇನುಗೂಡಿಗೆ ಕೈ ಹಾಕಿದೆ. ಇದಕ್ಕೆ ಬಿಜೆಪಿ ಮಾತ್ರವಲ್ಲ ಇಡೀ ಹಿಂದು ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.

ವಕ್ಫ್‌ ಹರಗಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಪಾದಯಾತ್ರೆ ಮಾಡಿದ ಜಿಲ್ಲಾ ಬಿಜೆಪಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಸಂದರ್ಭ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಮೂಡಾ ಹಗರಣ ಬದಿಗೆ ಸರಿಸಲು ವಕ್ಫ್ ಎಂಬ ಷಡ್ಯಂತ್ರ ಮಾಡುತ್ತಿದೆ. ಈ ನೆಪದಲ್ಲಿ ರೈತರ ಅಥವಾ ಧಾರ್ಮಿಕ ಸ್ಥಳಗಳ ಭೂಮಿ ಕಬಳಿಸುವ ಪ್ರಯತ್ನ ಮಾಡುತ್ತಿದೆ. ಈ ಹೋರಾಟ ಕೇವಲ ಜಿಲ್ಲಾಧಿಕಾರಿಗೆ ಮನವಿ ನೀಡಿ ನಿಲ್ಲುವುದಿಲ್ಲ ಎಂದರು.

ಉಡುಪಿ ಜಿಲ್ಲೆಯಲ್ಲಿ ಒಂದು ಇಂಚು ಭೂಮಿಯನ್ನು ವಕ್ಫ್ ವಶಪಡಿಸಿಕೊಂಡರೆ ಖಂಡಿತವಾಗಿಯೂ, ಹಿಂದೆ ಹಿಂದೂ ಸಂಘಟನೆಗಳ ನಡೆಸಿದ ಹೋರಾಟವನ್ನು ಮತ್ತೆ ನಡೆಸುತ್ತೇವೆ ಎಂದವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ನ ಇನ್ನೊಂದು ಹೆಸರೇ ಹಗರಣ...ಕಾಂಗ್ರೆಸ್ ನಲ್ಲಿ ಹಗರಣಗಳು ಹೊಸತೇನಲ್ಲ, ಕಾಂಗ್ರೆಸ್ ನವರು ಒಂದು ಕಣ್ಣಲ್ಲಿ ಅಳುತ್ತಾರೆ, ಇನ್ನೊಂದು ಕಣ್ಣಲ್ಲಿ ನಗುತ್ತಾರೆ, ಮುಡಾ ಸೈಟು ಹಗರಣ, ವಾಲ್ಮೀಕಿ ನಿಗಮದ ಹಗರಣ, ಅಬಕಾರಿ ಇಲಾಖೆಯ ಹಗರಣ, ವಕ್ಫ್ ಲ್ಯಾಂಡ್ ಜಿಹಾದ್ ಹಗರಣ, ಈಗ ಬೆಳಗಾವಿಯಲ್ಲಿ ಅಧಿಕಾರಿಯ ಆತ್ಮಹತ್ಯೆ ಹಗರಣ ಬೆಳಕಿಗೆ ಬಂದಿವೆ, ಹಗರಣಗಳಿಗೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಉಡುಪಿ ಶಾಸಕ ಯಶಪಾಲ್‌ ಸುವರ್ಣ ಲೇವಡಿ ಮಾಡಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲೆಯ ಯಾವುದೇ ಆಸ್ತಿ ವಕ್ಫ್ಎಂದು ನಮೂದಾಗಿದ್ದರೆ ಬಿಜೆಪಿಗೆ ತಿಳಿಸಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುತ್ತದೆ ಎಂದರು.

ಗುರುವಾರ ಮತ್ತು ಶುಕ್ರವಾರ ಉಡುಪಿ ಜಿಲ್ಲೆಯ ಪ್ರತಿ ತಾಲೂಕು ಕಚೇರಿಗಳಲ್ಲಿ ಪಕ್ಷದ ಕಾರ್ಯಕರ್ತರು, ಮಠಮಂದಿರಗಳ ಮುಖ್ಯಸ್ಥರು, ರೈತರು ಪಹಣಿ ಪರಿಶೀಲಿಸುವ ಆಂದೋಲನ ಕೈಗೆತ್ತಿಕೊಂಡಿದ್ದೇವೆ, ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ವಕ್ಫ್ ಕಬಳಿಸಿರುವ ಹಿಂದುಗಳ ಆಸ್ತಿಯನ್ನು ಪತ್ತೆ ಮಾಡಲಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಕಿರಣ್ ಕುಮಾರ್ ಬೈಲೂರು, ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್, ಮಾಜಿ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ಪ್ರಮುಖರಾದ ಪ್ರಭಾಕರ ಪೂಜಾರಿ, ವಿಜಯಕುಮಾರ್ ಕೊಡವೂರು, ಸತೀಶ್ ಕುಮಾರ್ ಮುಟ್ಲುಪಾಡಿ, ಜಿತೇಂದ್ರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ಯಾಮಲಾ ಕುಂದರ್, ಶಿಲ್ಪಾ ಶೆಟ್ಟಿ, ಗೀತಾಂಜಲಿ ಸುವರ್ಣ, ರಾಜೇಶ್ ಕಾವೇರಿ ಮತ್ತಿತರರು ಭಾಗವಹಿಸಿದ್ದರು.

......................

ಪೊಲೀಸರ ಜೊತೆ ನೂಕಾಟ, ತಳ್ಳಾಟ...

ಮೊದಲು ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ವಿರುದ್ಧ ದಿಕ್ಕಾರ ಕೂಗುತ್ತಾ ಬಂದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂದೆ ಪ್ರತಿಭಟನಾ ಸಭೆ ನಡೆಸಿದರು.

ಅಲ್ಲಿಂದ ನೇರವಾಗಿ ಪೊಲೀಸರ ತಡೆಯನ್ನು ಭೇದಿಸಿ ಶಾಸಕರು, ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು, ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆಯಿತು. ನಂತರ ಹೊರಗೆ ಬಂದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮನವಿ ಸ್ವೀಕರಿಸಿದರು.