ಕಾಂಗ್ರೆಸ್ಸಿಗರಿಂದ ವಕ್ಫ್‌ ಆಸ್ತಿ ಕಬಳಿಕೆ, ಮಾರಾಟ: ಛಲವಾದಿ ನಾರಾಯಣಸ್ವಾಮಿ

| Published : Nov 24 2024, 01:45 AM IST

ಕಾಂಗ್ರೆಸ್ಸಿಗರಿಂದ ವಕ್ಫ್‌ ಆಸ್ತಿ ಕಬಳಿಕೆ, ಮಾರಾಟ: ಛಲವಾದಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ ರೈತ ವಿರೋಧಿ ನೀತಿಯಿಂದಾಗಿ ಭುಗಿಲೆದ್ದಿರುವ ವಕ್ಫ್‌ ಗೊಂದಲ ನಿವಾರಣೆಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಜಮಖಂಡಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನ್ವರ್‌ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿ 54 ಸಾವಿರ ಎಕರೆ ಜಮೀನು ವಕ್ಫ್‌ ಹೆಸರಲ್ಲಿದೆ. ಆ ಪೈಕಿ 26 ಸಾವಿರ ಎಕರೆಗಳಷ್ಟು ಜಮೀನನ್ನು ಕಾಂಗ್ರೆಸ್‌ ನಾಯಕರು ಕಬಳಿಸಿ ಮಾರಾಟ ಮಾಡಿದ್ದು, ಅದನ್ನು ಹಿಂದಕ್ಕೆ ಕೊಡಬೇಕು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ವಕ್ಫ್‌ ಆಸ್ತಿ ಕಬಳಿಸಿದೆ. 12ನೇ ಶತಮಾನದ ಮಠ-ಮಾನ್ಯಗಳ, ರೈತರ ಜಮೀನು ಕಬಳಿಸಲು ಹುನ್ನಾರ ನಡೆಸಿದೆ. ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತಿದೆ ಎಂದರು. 1954ರಲ್ಲಿ ಪ್ರಧಾನಿ ನೆಹರು ವಕ್ಫ್‌ನ್ನು ಜಾರಿಗೆ ತಂದರು. ಇಂದಿರಾ ಗಾಂಧಿಯವರ ಅವಧಿಯಲ್ಲಿ ಆಸ್ತಿ ಗುರುತಿಸಲು ಸೂಚನೆ ನೀಡಲಾಯಿತು. ಆಗ ರಸ್ತೆಗಳು ಸಂಪರ್ಕ ಸಾಧನಗಳು ಇಲ್ಲದ ಸಮಯದಲ್ಲಿ ಮನಸ್ಸಿಗೆ ಬಂದತೆ ಹಲವಾರು ಜಮೀನುಗಳನ್ನು ವಕ್ಫ್‌ಗೆ ಸೇರಿಸಲಾಗಿದೆ. ವಕ್ಫ್‌ನ ಬಳಿ ಯಾವುದೇ ದಾಖಲೆಗಳು ಇಲ್ಲದ ಆಸ್ತಿಗಳಲ್ಲಿ ವಕ್ಫ್‌ನ ಹೆಸರು ಸೇರಿಸಿ ರೈತರಿಗೆ ತೊಂದರೆ ಕೊಡುವ ಉದ್ದೇಶ ಹೊಂದಿದೆ ಎಂದರು. ಕಾಂಗ್ರೆಸ್‌ನ ರೈತ ವಿರೋಧಿ ನೀತಿಯಿಂದಾಗಿ ಭುಗಿಲೆದ್ದಿರುವ ವಕ್ಫ್‌ ಗೊಂದಲ ನಿವಾರಣೆಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿಯವರು ವಕ್ಫ್‌ ವಿಚಾರದಲ್ಲಿ ಜಂಟಿ ಸಂಸತ್‌ ಕಮಿಟಿ ರಚಿಸಿದ್ದು, ವಕ್ಫ್‌ನಿಂದ ತೊಂದರೆಗೊಳಗಾದವರು ಈ ಸಮಿತಿ ಮುಂದೆ ತಮ್ಮ ಅಹವಾಲು ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರ ರೈತರ ಕಣ್ಣೊರೆಸುವ ತಂತ್ರ ಮಾಡದೇ ಗೆಜೆಟ್‌ನಲ್ಲಿರುವ ವಕ್ಫ್‌ ಹೆಸರನ್ನು ತೆಗೆದು ಹಾಕಲಿ. ಅಲ್ಲಾಹುವುಗೆ ಕಾಫಿರರ ಜಮೀನು ಆಸ್ತಿ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಕಾಫಿರರು ಕೊಟ್ಟರು ಅದನ್ನು ವಕ್ಫ್‌ನವರು ತೆಗೆದು ಕೊಳ್ಳಬಾರದು ಅದು ಷರಿಯತ್‌ ಕಾನೂನಿಗೆ ವಿರೋಧಿದಂತಾಗುವುದಿಲ್ಲವೇ ಎಂದರು.

ಅಭಿವೃದ್ಧಿ ಇಲ್ಲ:

ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಕೆಲಸ ಮಾಡದೇ, ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಖಜಾನೆ ಖಾಲಿಯಾಗಿದೆ. ಅನ್ನಭಾಗ್ಯದ 4 ಕಂತಿನ ಹಣ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ತಮ್ಮ ಕ್ಷೇತ್ರಗಳಿಗೆ ಹೋಗಲು ಶಾಸಕರು ಮಂತ್ರಿಗಳು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಸಿಎಂ ಮುಡಾ ಹಗರಣ, ಸಚಿವ ಪ್ರಿಯಾಂಕ ಖರ್ಗೆ ವಿಮಾನ ನಿಲ್ದಾಣದ ಪಕ್ಕದ 5 ಎಕರೆ ಜಮೀನು ಖರೀದಿಸಿದ್ದು, ಎಸ್‌ಟಿ ನಿಗಮದ ₹187 ಕೋಟಿ ಅವ್ಯವಹಾರ, ಹೀಗೆ ಲೂಟಿಕೋರ ಸರ್ಕಾರ ರಾಜ್ಯದಲ್ಲಿದೆ ಎಂದು ದೂರಿದರು. ಸರ್ಕಾರ ಪಾಪದ ಕಾಗೆ ಇದ್ದಂತೆ ಅದರಲ್ಲಿ ಕಪ್ಪು ಚುಕ್ಕೆ ಹುಡುಕುವುದು ಹೇಗೆ? ಸರ್ಕಾರವನ್ನು ಮನೆಗೆ ಕಳಿಸುತ್ತೇವೆ. ಜೆಡಿಎಸ್‌, ಬಿಜೆಪಿ ಜಂಟಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ಸಿಎಂರಿಂದ ಪಡಿತರ ಚೀಟಿ ಗೊಂದಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಪಡಿತರ ಚೀಟಿಗೊಂದಲ ಹುಟ್ಟುಹಾಕಿದರು. ಅವರ ಸರ್ಕಾರವೇ ನೀಡಿದ್ದ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ಮುಂದಾದರು. ಈಗ ಮತ್ತೆ ಪುನಃ ಅರ್ಜಿ ಸಲ್ಲಿಸಲು ಹೇಳುತ್ತಿದ್ದಾರೆ. ಬಡವರನ್ನು ಗೊಂದಲಕ್ಕೆ ಸಿಲುಕಿಸಲಾಗುತ್ತಿದೆ ಎಂದರು. ಮಹರಾಷ್ಟ್ರದ ಚುನಾವಣೆಗಳಲ್ಲಿ ರಾಜ್ಯದಲ್ಲಿ 10 ಗ್ಯಾರಂಟಿ ನೀಡಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸದಾನಂದ ಗೌಡರು ಸಿಎಂ ಆಗಿದ್ದಾಗ ವಕ್ಫ್‌ ಕುರಿತು ಅನ್ವರ್‌ ಮಾಣಿಪ್ಪಾಡಿ ಸಲ್ಲಿಸಿದ ವರದಿ ಮಂಡಿಸಬೇಕು ಎಂದು ಪ್ರಶ್ನೆ ಕೇಳಿದ್ದೆ. ವಿಧಾನ ಸಭೆ ಕಲಾಪದಲ್ಲಿ ಗೊಂದಲ ಉಂಟಾಗಿ ವರದಿ ಕುರಿತಾಗಿ ಚರ್ಚೆಯಾಗಲಿಲ್ಲ. ವರದಿ ಮಂಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಹಾರಾಷ್ಟ್ರದಲ್ಲಿ ಲಾಡಲಿ ಬೆಹನ್ ಎಂಬ ಯೋಜನೆಯನ್ನು ಪ್ರಧಾನಿ ಘೋಷಿಸಿದ್ದು ಅದನ್ನು ಜಾರಿಗೆ ತರುತ್ತೇವೆ ಎಂದರು. ಮುಖಂಡರಾದ ಸಿ.ಟಿ.ಉಪಾಧ್ಯಾಯ, ಜೆಡಿಎಸ್‌ನ ಸುಭಾಸ, ಯಮನೂರ ಮುಲ್ಲಂಗಿ, ಗಣೇಶ ಶಿರಗಣ್ಣವರ, ಪ್ರಕಾಶ ಕಾಳೆ, ಶಂಕರ ಕಾಳೆ , ಶ್ರೀಧರ ಕಂಬಿ, ಅಜಯ ಕಟಪಟ್ಟಿ, ನಗರಸಭೆ ಸದಸ್ಯ ಕುಶಾಲ ವಾಗ್ಮೋರೆ ಸೇರಿದಂತೆ ಹಲವರಿದ್ದರು.