ಸಾರಾಂಶ
ಕಾರವಾರ: ಬಡರೈತರ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಕೊಳ್ಳೆ ಹೊಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುವುದರ ಮೂಲಕ ರಾಜ್ಯವನ್ನು ಪಾಕಿಸ್ತಾನ ಮಾಡಲು ಮುಂದಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ವಕ್ಫ್ ಬೋರ್ಡ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಾರ್ವಜನಿರು, ಬಡ ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸುತ್ತಿದೆ. ರಾಜ್ಯ ಸರ್ಕಾರದ ಬೆಂಬಲ ಇಲ್ಲದೆ ಇದು ಸಾಧ್ಯವಿಲ್ಲ. ಜನರ ಅಭಿವೃದ್ಧಿ ಮಾಡುವುದು ಬಿಟ್ಟು ಹಲವು ಬಗೆಯ ಹಗರಣದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ ಎಂದರು.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗಲೇ ಅಧಿಕಾರ ಕಳೆದುಕೊಳ್ಳುವ ಆತಂಕ ಉಂಟಾಗಿದೆ ಎಂದರು.ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗ ವಕ್ಫ್ ಬೋರ್ಡ್ ಹಗರಣ ದೊಡ್ಡದಾಗಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿ ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯ ಅಡಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವಕ್ಫ್ ಬೋರ್ಡ್ ಕ್ರಮ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ಗೆಲ್ಲಲು ವಕ್ಫ್ ಅಧಿಸೂಚನೆ ವಾಪಸ್ ಪಡೆಯುವ ನಾಟಕ ಮಾಡುತ್ತಿದ್ದಾರೆ. ವಕ್ಪ್ ಅಕ್ರಮ ಬಹಿರಂಗವಾಗುತ್ತಿದ್ದಂತೆ ಜಮೀನಿನ ವಾರಸುದಾರರ ಮಾಹಿತಿ ಪಡೆಯಲು ಬಳಸುತ್ತಿದ್ದ ದಿಶಾಂಕ್ ಅಪ್ಲಿಕೇಶನ್‌ನ್ನು ಸರ್ಕಾರ ಸ್ಥಗಿತಗೊಳಿಸಿದೆ. ರೈತ ಸಂಘಟನೆಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ನಗರದ ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮೀಜಿ, ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮತ್ತಿತರರು ಮಾತನಾಡಿದರು.
ಪ್ರತಿಭಟನಕಾರರು ಕಾಂಗ್ರೆಸ್ಸ್ ಸರ್ಕಾರ ಹಾಗೂ ವಕ್ಫ್ ಬೋರ್ಡ್ ವಿರುದ್ಧ ಘೋಷಣೆ ಕೂಗಿದರು. ವಕ್ಫ್ ಹಗರಣದ ಬಗ್ಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಕನಿಷ್ಕ ಅವರ ಮೂಲಕ ಜಿಲ್ಲಾ ಆಡಳಿತಕ್ಕೆ ಮನವಿ ನೀಡಿದರು.
ವಕ್ಫ್ ಬೋರ್ಡ್ ಬಡ ರೈತರ, ಮಠ ಮಂದಿರ, ಸರ್ಕಾರಿ ಶಾಲೆಗಳ ಭೂಮಿಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನೋಂದಾಯಿಸುತ್ತಿದೆ. ಈ ಬಗ್ಗೆ ಕ್ರಮ ಆಗಬೇಕು. ವಕ್ಫ್ ಬೋರ್ಡ್ ಆಸ್ತಿಗೆ ಸಂಬಂಧಿಸಿದಂಥೆ ಸಂಬಂಧಪಟ್ಟವರಿಗೆ ನೀಡಲಾಗಿದ್ದ ನೋಟಿಸ್ ಹಿಂಪಡೆಯುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಆಗಿಲ್ಲ. ಕೇವಲ ನೋಟಿಸ್ ಹಿಂಪಡೆಯುವುದು ಮಾತ್ರವಲ್ಲದೆ 1974ರ ಗೆಜೆಟ್ ಅಧಿಸೂಚನೆ ರದ್ದು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯ ಮಾಡಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ನಾಗರಾಜ ನಾಯಕ, ಶಿವಾಜಿ ನರಸಾನಿ, ನಗರಸಭಾ ಅಧ್ಯಕ್ಷ ರವಿರಾಜ ಅಂಕೋಲೆಕರ, ಜಿಲ್ಲಾ ಮಾಧ್ಯಮ ಸಂಚಾಲಕ ಕಿಶನ್ ಕಾಂಬ್ಳೆ, ಕಾರವಾರದ ನಗರ ಮಂಡಲದ ಅಧ್ಯಕ್ಷ ನಾಗೇಶ ಕುರಡೇಕರ, ಗ್ರಾಮೀಣ ಮಂಡಲದ ಸುಭಾಷ ಗುನಗಿ ಮತ್ತಿತರರು ಇದ್ದರು.
ಸಿಎಂ ರಾಜೀನಾಮೆ ನೀಡಲಿಬಿಪಿಎಲ್ ಪಡಿತರ ಕಾರ್ಡ್ ರದ್ದತಿ ವಿಚಾರದಿಂದ ಜನರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಕ್ರಮ ಆಗಬೇಕು. ವಕ್ಫ್ ಬೋರ್ಡ್ ರೈತರ ಆಸ್ತಿ ಕಬಳಿಕೆ, ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.