ಸಾರಾಂಶ
ಮಸ್ಕಿಯ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಒಳ ಮೀಸಲಾತಿ ಜಾರಿಗಾಗಿ ಜರುಗಿದ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಸಿಎಂ ಸಿದ್ದರಾಮಯ್ಯನವರು ಅ.2 ರೊಳಗಾಗಿ ಸುಪ್ರೀಂ ಕೋರ್ಟಿನ ತಿರ್ಪಿನಂತೆ ಒಳ ಮೀಸಲಾತಿಯನ್ನು ಘೋಷಿಸದಿದ್ದರೆ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಅಶೋಕನ ನಾಡು ಮಸ್ಕಿಯಿಂದಲೇ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಯುದ್ಧ ಆರಂಭವಾಗಲಿದೆ ಎಂದು ಪ್ರೋ.ಹರಿರಾಮ ಎಚ್ಚರಿಕೆ ನೀಡಿದರು.ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಳ ಮೀಸಲಾತಿ ಐಕ್ಯ ಹೋರಾಟ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಹೆಸರು ಹೇಳಿಕೊಂಡು ಡೋಂಗಿ ನಾಟಕವಾಡುವ ವ್ಯಕ್ತಿಗಳಿಂದ ವರದಿ ಜಾರಿ ವಿಳಂಭವಾಗಿದೆ.
ಒಳ ಮೀಸಲಾತಿ ಈಗ ಕೇಂದ್ರದ ಅಂಗಳದಲ್ಲಿ ಇಲ್ಲ, ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಆದೇಶ ನೀಡಿದೆ. ಆದರೆ ಸಿದ್ದರಾಮಯ್ಯನವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದಾರೆ ಎಂದರು.ಒಳ ಮೀಸಲಾತಿ ಕೊಡದಿದ್ದರೆ ಯಾವ ಜನಾಂಗ ನಿಮ್ಮನ್ನು ಅಧಿಕಾರಕ್ಕೆ ತಂದಿದೆ ಅದೇ ಶೋಷಿತ, ದಲಿತ ಸಮಾಜ ಕೆಳಗೆ ಇಳಿಸುತ್ತದೆ ಎಂದರು. ಸಿದ್ದರಾಮಯ್ಯನವರು ಸುಪ್ರೀಂ ಕೊರ್ಟಿ ಗಿಂತ ದೊಡ್ಡವರಲ್ಲ ಕೂಡಲೇ ವರದಿ ಜಾರಿಗೆ ತನ್ನಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಸಿ.ದಾನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಬಾಲಸ್ವಾಮಿ ಕೊಡ್ಲಿ, ಸಂತೋಷ ಕೊಡಿಹಳ್ಳಿ, ಆರ್. ಮಾನ್ಸಯ್ಯ, ಅಂಬಣ್ಣ ಆರೋಲಿ, ಎಂ.ವೀರುಪಾಕ್ಷಿ ಮಾತನಾಡಿದರು.ಈ ವೇಳೆ ಜಿ.ವಿ. ರಾಜು ರಾಯಚೂರು, ಶಿವರಾಜ ಅಕ್ಕರಕಿ, ಭೋನವೆಂಚರ್ ಸಿಂಧನೂರು, ಹನುಮಂತಪ್ಪ ಕಾಕರಗಲ್, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಹನುಂತಪ್ಪ ಮುದ್ದಾಪುರ, ದುರಗಪ್ಪ ಗುಡಗಲದಿನ್ನಿ, ಎಚ್.ಎಂ.ಬಡಿಗೇರ್ ಸೇರಿದಂತೆ ವಿವಿಧ ಮುಖಂಡರು ಇದ್ದರು. ಮೌನೇಶ ಮುರಾರಿ ನಿರೂಪಿಸಿದರು.