ಸಾರಾಂಶ
ಜಿ ಡಿ ಹೆಗಡೆ
ಕಾರವಾರ:ಇಸ್ರೇಲ್ ಹಾಗೂ ಹಮಾಸ್ ನಡುವಣ ಯುದ್ಧ ಉತ್ತರ ಕನ್ನಡದಲ್ಲಿ ಭಯಕ್ಕೆ ಕಾರಣವಾಗಿದೆ. ಇಲ್ಲಿನ ಸಾವಿರಾರು ಜನರು ಇಸ್ರೇಲ್‌ನಲ್ಲಿದ್ದಾರೆ. ಅವರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇಸ್ರೇಲ್‌ನ ಉತ್ತರ ಭಾಗದಲ್ಲಿ ಯುದ್ಧ ನಡೆಯುತ್ತಿದೆ. ನನ್ನ ಪತ್ನಿ ದಕ್ಷಿಣ ಭಾಗದಲ್ಲಿದ್ದಾರೆ. ತಾವು ಸುರಕ್ಷಿತವಾಗಿರುವುದಾಗಿ ಹೇಳುತ್ತಿದ್ದಾರೆ. ಆದರೂ ಊರಿನಲ್ಲಿ ಇರುವ ನಮಗೆ ಭಯ ಕಾಡುತ್ತಿದೆ ಎಂದು ಕಾರವಾರದ ರುಜಾಯೋ ಲೋಪಿಸ್ ಆತಂಕ ವ್ಯಕ್ತಪಡಿಸುತ್ತಾರೆ.ಇದು ಕೇವಲ ಇವರೊಬ್ಬರ ಕಳವಳವಷ್ಟೇ ಅಲ್ಲ. ಜಿಲ್ಲೆಯ ಸಾವಿರಾರು ಕುಟುಂಬಗಳ, ಅವರ ಆಪ್ತರು, ಸಂಬಂಧಿಗಳ ಕಳವಳವೂ ಹೌದು.ನಗರದ ಬೈತಖೋಲ ನಿವಾಸಿಯಾಗಿರುವ ರುಜಾಯೋ ಆಟೋರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದು, ಅವರ ಪತ್ನಿ ಕ್ರಿಸ್ಮಾ ಲೊಪಿಸ್ ಇಸ್ರೇಲ್‌ನಲ್ಲಿ ಕೇರ್ ಟೇಕರ್ ಆಗಿ ಕಳೆದ ೭ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಜನವರಿಯಲ್ಲಿ ಊರಿಗೆ ಬಂದು ಹೋಗಿದ್ದರು.
ಆಗಾಗ ಸಣ್ಣಪುಟ್ಟ ದಾಳಿ ಆಗುತ್ತಿದ್ದ ಬಗ್ಗೆ ಹೇಳುತ್ತಿದ್ದರು. ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿಯೇ ಯುದ್ಧ ಪ್ರಾರಂಭವಾಗಿದೆ. ಪ್ರತಿ ನಿತ್ಯ ೧೦ಕ್ಕೂ ಅಧಿಕ ಬಾರಿ ಕರೆ ಮಾಡುತ್ತಾರೆ. ಸೈರನ್ ಆಗುತ್ತಿದ್ದಂತೆ ಅಲ್ಲಿನ ಸರ್ಕಾರ ನಿರ್ಮಾಣ ಮಾಡಿಕೊಟ್ಟ ಬಂಕರ್ ಒಳಗೆ ಹೋಗಿ ಸೇರಿಕೊಳ್ಳುತ್ತಾರಂತೆ ಎಂದು ಮಾಹಿತಿ ನೀಡಿದರು.ನಾವು ಕರೆ ಮಾಡಿದ್ದ ವೇಳೆಯಲ್ಲೇ ಕೆಲವೊಮ್ಮೆ ಸೈರನ್ ಆಗುವುದು, ಹೆಲಿಕಾಪ್ಟರ್, ವಿಮಾನಗಳ ಶಬ್ದ ಕೂಡಾ ಕೇಳುತ್ತದೆ. ಆಗೆಲ್ಲ ನಮಗೆ ಭಯ ಉಂಟಾಗುತ್ತಿದೆ. ಪತ್ನಿ ಅಲ್ಲಿನ ವೃದ್ಧೆಯ ಕೇರ್ ಟೇಕರ್ ಆಗಿ ಹೋಗಿದ್ದು, ಅಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ನಮಗೆ ನಿದ್ದೆ ಬರುತ್ತಿಲ್ಲ. ಊಟ ಸೇರುತ್ತಿಲ್ಲ. ಏನಾಗುತ್ತದೆಯೋ ಎನ್ನುವ ಆತಂಕ ಸದಾ ಕಾಡುತ್ತಿದೆ ಎನ್ನುತ್ತಾರೆ.
ಇಸ್ರೇಲಿನಲ್ಲಿರುವ ಉತ್ತರ ಕನ್ನಡದವರು ಸದ್ಯ ಸುರಕ್ಷಿತವಾಗಿದ್ದಾರೆ. ಏಕೆಂದರೆ ಬಹುತೇಕರು ಯುದ್ಧ ನಡೆಯುತ್ತಿರುವ ಗಾಜಾ, ಜೆರುಸಲೆಂ ಹಾಗೂ ಗಡಿಯಿಂದ ದೂರದ ಟೆಲ್ ಅವೀವ್, ಹೈಫಾ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಮುಂದೆ ಏನಾಗಲಿದೆ ಎಂಬ ಆತಂಕ ಇವರಲ್ಲಿದೆ.ಊರಿನಲ್ಲಿ ಇರುವವರ ಸಮಾಧಾನಕ್ಕೆ ಸುರಕ್ಷಿತವಾಗಿದ್ದೇವೆ ಎನ್ನುತ್ತಾರೆ. ಅಲ್ಲಿನ ನಿಜವಾದ ಸ್ಥಿತಿ ನಮಗೆ ತಿಳಿಯುವುದಿಲ್ಲ. ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಕೇಂದ್ರ ಸರ್ಕಾರ ಭಾರತೀಯರ ರಕ್ಷಣೆಗೆ ಸೂಕ್ತ ಕ್ರಮವಹಿಸುವಂತೆ ಅಲ್ಲಿನ ಸರ್ಕಾರದ ಜತೆಗೆ ಮಾತುಕತೆ ನಡೆಸಬೇಕು ಎನ್ನುತ್ತಾರೆ ಇಸ್ರೇಲ್‌ನಲ್ಲಿ ಇರುವ ಮಹಿಳೆಯ ಪತಿ ರುಜಾಯೋ ಲೋಪಿಸ್.
ಉತ್ತರ ಕನ್ನಡ ಜಿಲ್ಲೆಯ ೩೦೦ಕ್ಕೂ ಅಧಿಕ ನಾಗರಿಕರು ಇಸ್ರೇಲ್‌ನಲ್ಲಿದ್ದಾರೆ ಎನ್ನುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇದ್ದಲ್ಲಿ ಡಿಸಿ ಕಚೇರಿಯ ಸಹಾಯವಾಣಿಗೆ ಕರೆ ಮಾಡಬಹುದು. ಅಲ್ಲಿದ್ದವರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.ಸಹಾಯವಾಣಿಗೆ 7 ಕರೆಇಸ್ರೇಲ್‌ನಲ್ಲಿ ಸಿಲುಕಿಕೊಂಡಿರುವವರ ಮಾಹಿತಿ ನೀಡಲು ಉತ್ತರ ಕನ್ನಡ ಜಿಲ್ಲೆಯ ಡಿಸಿ ಕಚೇರಿಯಲ್ಲಿ ತೆರಯಲಾದ ಸಹಾಯವಾಣಿಗೆ ಮಂಗಳವಾರ ಏಳು ಕರೆ ಬಂದಿದೆ. ಇಸ್ರೇಲ್‌ನ ದಕ್ಷಿಣ ಭಾಗದಲ್ಲಿಯೇ ಎಲ್ಲರೂ ವಾಸವಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಲ್ಲಿ ವಾಸವಿರುವ ಕುಟುಂಬಸ್ಥರು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ಕಾರವಾರ ೩, ಯಲ್ಲಾಪುರ, ಹೊನ್ನಾವರದಿಂದ ತಲಾ ೨ ಕರೆ ಸ್ವೀಕರಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ೧೦೭೭ ಅಥವಾ (೦೮೩೮೨) ೨೨೯೮೫೭ ಅಥವಾ ೯೪೮೩೫೧೧೦೧೫ ಅಥವಾ ರಾಜ್ಯ ಸರ್ಕಾರದ ತುರ್ತು ಸಹಾಯವಾಣಿ ಸಂಖ್ಯೆ (೦೮೦) ೨೨೩೪೦೬೭೬, ೨೨೨೫೩೭೦೭ ಮಾಹಿತಿ ನೀಡಬಹುದಾಗಿದೆ.