ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಜನತೆ ಸಮಸ್ಯೆ ಆಲಿಸಿ, ಸ್ಥಳೀಯ ಆಡಳಿತ ಪುರಸಭೆ ಗಮನಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಪುರಸಭೆಯಿಂದ ಜನರಿಗೆ ದೊರೆಯಬಹುದಾದ ನಾಗರಿಕ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಮ್ಮ ಕನ್ನಡನಾಡು ಹಿತರಕ್ಷಣಾ ಸಮಿತಿಯಿಂದ ಪ್ರತಿದಿನ ಸಂಜೆ ಒಂದೊಂದು ವಾರ್ಡ್‌ಗಳಲ್ಲಿ ವಾರ್ಡ್ ಬೀಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಹೇಳಿದರು.ಪಟ್ಟಣದ 10ನೇ ವಾರ್ಡ್‌ನಲ್ಲಿ ವಾರ್ಡ್ ಬೀಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಗೆ ಪಟ್ಟಣದ ಎಲ್ಲ ಪ್ರದೇಶಗಳಲ್ಲಿಯೂ ಗುಂಡಿ ತೆಗೆದು ಸರಿಯಾಗಿ ಮುಚ್ಚಿಲ್ಲ. ಆದಕಾರಣ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ರಸ್ತೆಗಳಲ್ಲಿ ಬಿದ್ದ ಮಣ್ಣು ತೆರವುಗೊಳಿಸಿಲ್ಲ. ಪರಿಣಾಮ ಮಳೆ ಬಂದ ಸಂದರ್ಭ ರಸ್ತೆಗಳೆಲ್ಲ ಕೆಸರು ಗದ್ದೆಗಳಂತಾಗುತ್ತಿವೆ. ವಾಹನಗಳ ಸವಾರರು ಪ್ರಯಾಸದಿಂದ ಸಂಚರಿಸಬೇಕಾಗಿದೆ. ಈ ಬಗ್ಗೆ ಗುತ್ತಿಗೆದಾರರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೇ ಆ ಟ್ಯಾಂಕ್‌ನಲ್ಲಿಯೂ ಲಕ್ಷಾಂತರ ಲಾರ್ವ ಉತ್ಪತ್ತಿಯಾಗಿದೆ. ಆ ಟ್ಯಾಂಕ್ ಸ್ವಚ್ಛಗೊಳಿಸಲು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರಯೋಜನವಾಗಿಲ್ಲ. ಕೂಡಲೇ ಸ್ವಚ್ಛಗೊಳಿಸಿ, ಪ್ರಯಾಣಿಕರಿಗೆ ಕುಡಿವ ನೀರು ಸಿಗುವಂತೆ ಮಾಡಬೇಕು ಎಂದರು.ಸಮಿತಿ ನಗರ ಘಟಕ ಅಧ್ಯಕ್ಷ ನಟರಾಜ ರಾಯ್ಕರ್ ಮಾತನಾಡಿ, ಪಟ್ಟಣದ ಜನತೆಗೆ ವಾರಕ್ಕೊಮ್ಮೆ ಕುಡಿಯುವ ನೀರು ವಿತರಣೆ ಮಾಡುತ್ತಿದ್ದಾರೆ. ಈ ನೀರು ಮಣ್ಣು ಮಿಶ್ರಿತವಾಗಿದೆ. ಕುಡಿಯಲು ಸಹ ಯೋಗ್ಯವಾಗಿಲ್ಲ. ಪಟ್ಟಣದಲ್ಲಿ ಸುಮಾರು 10ರಿಂದ 15 ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. ಇವುಗಳ ಸರಿಯಾದ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಸಮಿತಿ ಗೌರವ ಅಧ್ಯಕ್ಷ ಸರ್ದಾರ್ ಮಾತನಾಡಿ, ಪಟ್ಟಣದ ಜನತೆಗೆ ಬೇಕಾದ ಮೂಲಸೌಲಭ್ಯ ಕಲ್ಪಿಸಿಕೊಡುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಈ ವೇಳೆ ಸಮಿತಿ ತಾಲೂಕು ಅಧ್ಯಕ್ಷ ಎಂ.ಅಣ್ಣೋಜಿರಾವ್ ಪವಾರ್, ಪ್ರಮುಖರಾದ ಶಶಿಕಲಾ ನಾಗರಾಜ್, ಯೋಗರಾಜ್, ಅಲ್ಪಸಂಖ್ಯಾತ ಘಟಕ ಗೌರವ ಅಧ್ಯಕ್ಷ ವಾಸಿಕ್ ಸಾಬ್, ಅಂಜದ್ ಬಾಷಾ, ಯೋಗರಾಜ್, ಸಚಿನ್, ರುದ್ರೇಶ್, ಅಪ್ರೋಜ್, ಸುಧಾ ನಾಗರಾಜ್, ಸಮಿತಿ ಪದಾಧಿಕಾರಿಗಳು ಇದ್ದರು.