ಪಕ್ಷದ ವಾರ್ಡ್ ಸಮಿತಿಗಳನ್ನು ಪುನರ್ ರಚಿಸಬೇಕು: ಡಾ.ಬಿ.ಎಲ್.ಶಂಕರ್‌

| Published : Sep 24 2024, 01:49 AM IST

ಸಾರಾಂಶ

ಚಿಕ್ಕಮಗಳೂರು, ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಸಮಿತಿಗಳನ್ನು ಪುನರ್ ರಚಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಕರೆ ನೀಡಿದರು.

- ಜಿಲ್ಲಾ ಕಾಂಗ್ರೆಸ್‌ ಭವನ ನಿರ್ಮಾಣ । ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಸಮಿತಿಗಳನ್ನು ಪುನರ್ ರಚಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಮಿತಿಗಳು ಪುನರ್‌ ರಚಿಸುವ ಜತೆಗೆ ಅವುಗಳು ಕಾರ್ಯ ಪ್ರವೃತ್ತ ವಾಗುವಂತೆ ನೋಡಿಕೊಳ್ಳಬೇಕು ಹಾಗೂ ಬಿಎಲ್‌ಎ-2 ನೇಮಕ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಭವನ ಕಟ್ಟಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು. ಕಟ್ಟಡ ಕಟ್ಟುವ ಜೊತೆಗೆ ಪಕ್ಷವನ್ನು ಇನ್ನು ಹೆಚ್ಚು ಸಂಘಟನಾತ್ಮಕವಾಗಿ ಕಟ್ಟಬೇಕು ಎಂದರು.

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಆಶಯದಂತೆ ಕಾಂಗ್ರೆಸ್ ಕಟ್ಟಡಗಳ ಸಮಿತಿ ಅಧ್ಯಕ್ಷರು ಹಾಗೂ ಸಚಿವರಾದ ಕೆ.ಜೆ.ಜಾರ್ಜ್ ಅವರು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅತ್ಯಂತ ಉತ್ಸುಕರಾಗಿದ್ದಾರೆ. ಜಿಲ್ಲೆಯ ಐವರು ಶಾಸಕರು ಕೂಡ ಇವರ ಆಶಯದ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹವಾದುದು ಎಂದು ಹೇಳಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಪಕ್ಷ ಕಟ್ಟುವ ಜೊತೆಗೆ ಪಕ್ಷದ ಮನೆ ಕಟ್ಟುವುದು ಕೂಡ ಅಗತ್ಯವಾಗಿದೆ. ನನ್ನ ಸುದೈವ ಜಿಲ್ಲಾ ಕೇಂದ್ರದಲ್ಲಿ ವಿಶಾಲವಾದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು. ಇಂತಹ ಕಟ್ಟಡ ಕಟ್ಟುವಾಗ ಸಹಕಾರಕ್ಕಾಗಿ ಮೂರು ವರ್ಗದ ಜನರನ್ನು ಕಾಣಬಹುದು. ಹಣವುಳ್ಳವರು, ಪಕ್ಷದ ಬಗ್ಗೆ ಗೌರವ ವಿರುವವರು, ದಾನ ನೀಡಿ ಗೌಪ್ಯವಾಗಿರುತ್ತಾರೆ. ಮತ್ತೊಂದು ವರ್ಗ ತಮ್ಮ ಅಲ್ಪ ಕಾಣಿಕೆಯೊಂದಿಗೆ ಸಂಗ್ರಹಕ್ಕೆ ಮುಂದಾಗುತ್ತಾರೆ. ಮತ್ತೊಂದು ವರ್ಗ ದೈಹಿಕವಾಗಿ ಸಹಕಾರ ನೀಡುತ್ತಾರೆ. ಈ ಮೂರು ವರ್ಗದ ಜನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ತಮ್ಮ ತಮ್ಮ ಶಕ್ತನುಸಾರ ಸಹಾಯ ಒದಗಿಸಲಿದ್ದು, ಸುಂದರ ಭವನ ನಿರ್ಮಾಣವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.ಕಟ್ಟಡ ಉಪ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಭವನ ನಿರ್ಮಾಣ ಸಮಿತಿ ರೂಪುಗೊಂಡಿದ್ದು, ಕಟ್ಟಡ ಉಪ ಸಮಿತಿಗೆ ನನ್ನನ್ನು ಅಧ್ಯಕ್ಷರಾಗಿ, ಕೆ.ಎಸ್.ಶಾಂತೇಗೌಡ ಅವರನ್ನು ಖಜಾಂಚಿಯನ್ನಾಗಿ ಮಾಡಿದ್ದು, ಸಮಿತಿ ಸಲಹೆಯಂತೆ ಕಾರ್ಯ ಪ್ರವೃತ್ತ ವಾಗಿದ್ದೇವೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಈಗಾಗಲೇ ತರೀಕೆರೆ ಹಾಗೂ ಕಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಭವನ ನಿರ್ಮಾಣಕ್ಕೆ ವಂತಿಕೆ ಸಂಗ್ರಹ ಕಾರ್ಯ ಸಕಾರಾತ್ಮಕವಾಗಿ ಮುಂದುವರೆದಿದ್ದು, ಇಂದು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗಳು ಮುಂದುವರಿಯಲಿವೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ನಯಾಜ್ ಮಾತನಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗೂ ನಗರಸಭಾ ಸದಸ್ಯ ಮುನೀರ್ ಅಹಮದ್ ಸ್ವಾಗತಿಸಿದರು, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು ವಂದಿಸಿದರು. 23 ಕೆಸಿಕೆಎಂ 3ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಡಾ. ಬಿ.ಎಲ್‌. ಶಂಕರ್‌ ಮಾತನಾಡಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಮಂಜೇಗೌಡ, ಡಾ. ಡಿ.ಎಲ್‌. ವಿಜಯಕುಮಾರ್‌ ಇದ್ದರು.