ಗ್ರಾಮವು ಈಗ ಪಟ್ಟಣವಾಗಿ ಪರಿವರ್ತನೆಯಾಗಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಕಟ್ಟಡ, ನಿವೇಶನ ಹಾಗೂ ವಸತಿಗೃಹಗಳ ದಾಖಲಾತಿಗಳನ್ನು ಆಸ್ತಿಯ ಫಾರ್ಮ್ ನಂ. ೩ಕ್ಕೆ ಕಡ್ಡಾಯವಾಗಿ ವರ್ಗಾಯಿಸಿಕೊಳ್ಳಬೇಕು

ಹನುಮಸಾಗರ: ಗ್ರಾಮದಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಹನುಮಸಾಗರದಲ್ಲಿ ವಾರ್ಡ್ ವಿಂಗಡಣೆ ಸಂಬಂಧಿಸಿದ ಸಮೀಕ್ಷೆ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ತಿಳಿಸಿದ್ದಾರೆ.

ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿದ ಅವರು, ಗ್ರಾಮವು ಈಗ ಪಟ್ಟಣವಾಗಿ ಪರಿವರ್ತನೆಯಾಗಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಕಟ್ಟಡ, ನಿವೇಶನ ಹಾಗೂ ವಸತಿಗೃಹಗಳ ದಾಖಲಾತಿಗಳನ್ನು ಆಸ್ತಿಯ ಫಾರ್ಮ್ ನಂ. ೩ಕ್ಕೆ ಕಡ್ಡಾಯವಾಗಿ ವರ್ಗಾಯಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಪ್ರಕ್ರಿಯೆಗೆ ಸುಮಾರು ೪೫ ದಿನಗಳ ಕಾಲವಕಾಶ ಬೇಕಾಗುವುದರಿಂದ ಸಾರ್ವಜನಿಕರು ವಿಳಂಬ ಮಾಡದೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದರೊಂದಿಗೆ, ಈ ಹಿಂದೆ ಸೂಚಿಸಿದಂತೆ ಇನ್ನೂ ಆಸ್ತಿ ತೆರಿಗೆ ಪಾವತಿಸದವರು ಕೂಡಲೇ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ತೆರಿಗೆ ತುಂಬಬೇಕು ಎಂದು ಅವರು ಹೇಳಿದರು. ಜನನ ಪ್ರಮಾಣಪತ್ರ ಸೇರಿದಂತೆ ವಿವಿಧ ಅಗತ್ಯ ದಾಖಲೆಗಳು ಈಗ ಪಟ್ಟಣ ಪಂಚಾಯಿತಿಯಲ್ಲಿಯೇ ಲಭ್ಯವಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಪ್ರಸ್ತುತ ನಡೆಯುತ್ತಿರುವ ವಾರ್ಡ್ ಸಮೀಕ್ಷೆಯ ಆನಂತರ ಪಟ್ಟಣದಲ್ಲಿ ಸುಮಾರು ೧೮ ಅಥವಾ ೧೯ ವಾರ್ಡ್‌ಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಸಿಬ್ಬಂದಿ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ನಿರೀಕ್ಷಿಸಲಾಗಿದೆ. ಸದ್ಯ ಅನುಮೋದನೆಗೊಂಡಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಬ್ಯಾನರ್‌, ಜಾಹೀರಾತು ಫಲಕ ಅಥವಾ ಕಟೌಟ್‌ಗಳನ್ನು ಅಳವಡಿಸುವ ಮೊದಲು ಪಟ್ಟಣ ಪಂಚಾಯಿತಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ನಿಯಮ ಉಲ್ಲಂಘನೆ ಮಾಡಿದರೆ ಸಂಬಂಧಿತ ಅಧಿಕಾರಿಗಳಿಂದ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪಪಂ ಸಿಬ್ಬಂದಿ ಮಹಾಂತಯ್ಯ ಕೋಮಾರಿ, ವೀರೇಶ ಕೂರ್ನಾಳ ಹಾಗೂ ಬಸವರಾಜ ಶಿವಸಿಂಪಿ ಉಪಸ್ಥಿತರಿದ್ದರು.