ಸಾರಾಂಶ
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲಾ ಕೇಂದ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ರಾಮನಗರವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಆಯಾಯ ವಾರ್ಡಿನ ನಾಗರಿಕರ ಅಹವಾಲು ಆಲಿಸಿ, ಸಮಸ್ಯೆ ಬಗೆಹರಿಸಲು ವಾರ್ಡ್ ಸಭೆ ಆಯೋಜಿಸಲು ನಗರಸಭೆ ಮುಂದಾಗಿದೆ.
ರಾಮನಗರ ಟೌನ್ ಅನ್ನು ಸುಂದರ ಹಾಗೂ ವ್ಯವಸ್ಥಿತವಾಗಿಸಲು ಆದ್ಯತೆ ನೀಡಬೇಕಿದೆ. ಈ ಪ್ರಕ್ರಿಯೆಗಳಿಗೆ ಸಾಮಾನ್ಯ ಜನರ ಸಹಭಾಗಿತ್ವವೂ ಅಗತ್ಯ. ಅದಕ್ಕಾಗಿ ಪ್ರತಿ ವಾರ್ಡ್ ನಲ್ಲೂ ಸಭೆ ನಡೆಸಿ, ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಲಾಗುವುದು. ಆ ಮೂಲಕ ನಗರದ ಅಭಿವೃದ್ಧಿಯ ಸಮಗ್ರ ರೂಪುರೇಷೆ ಸಿದ್ಧಪಡಿಸುವ ಉದ್ದೇಶ ಹೊಂದಲಾಗಿದೆ.ಈಗ ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ಅಧಿನಿಯಮ 2020ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೆರೆ ಹೊರೆ ಗುಂಪು, ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸುವ ಅವಕಾಶ ಇದೆ. ಆದರೆ, ನಗರಸಭೆ ನೂತನ ಅಧ್ಯಕ್ಷ ಕೆ.ಶೇಷಾದ್ರಿಯವರು ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆ ಮಾದರಿಯಲ್ಲಿಯೇ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್ ಸಭೆ ಆಯೋಜಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಜಿಲ್ಲಾ ಕೇಂದ್ರವು ರಸ್ತೆ, ಚರಂಡಿ, ಬೀದಿ ದೀಪ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಂದ ಸೊರಗಿದೆ. ಇಂದಿಗೂ ನಾಗರಿಕರಿಗೆ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಈ ಎಲ್ಲ ಸಮಸ್ಯೆಗಳಿಗೆ ಹಂತ ಹಂತಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಾರ್ಡ್ ಸಭೆಗಳು ಸಹಕಾರಿಯಾಗಲಿವೆ.ನಗರದಲ್ಲಿ 31 ವಾರ್ಡುಗಳಿದ್ದು, ಪ್ರತಿ ವಾರ್ಡುಗಳಲ್ಲಿ ವಾರ್ಡ್ ಸಭೆ ಆಯೋಜಿಸುವ ಮೂಲಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶ ಇದಾಗಿದೆ. ಇನ್ನು ವಾರ್ಡ್ ಸಭೆಯನ್ನು ವಾರದಲ್ಲಿ ಒಂದು ಬಾರಿ, 15 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಆಯೋಜಿಸಬೇಕೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.
ಆದರೆ, ವಾರ್ಡ್ ಸಭೆ ನಡೆಯಲಿರುವ ವಾರ್ಡ್ ಗಳ ಬಗ್ಗೆ ಮುಂಚಿತವಾಗಿಯೇ ನಾಗರಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ. ಈ ವೇಳೆ ಆಯಾ ವಾರ್ಡಿನ ಹಿರಿಯ ನಾಗರಿಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳ ಅಹವಾಲು ಮತ್ತು ಸಲಹೆಗಳನ್ನು ಆಲಿಸಲಾಗುವುದು. ನಂತರ ಸ್ಥಳದಲ್ಲಿಯೇ ಪರಿಹಾರ ನೀಡುವ ಕೆಲಸ ಮಾಡಲಾಗುತ್ತದೆ.ಈ ವಾರ್ಡ್ ಸಭೆಯಲ್ಲಿ ನಿವೃತ್ತ ನೌಕರರನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಅವರೆಲ್ಲರ ವೃತ್ತಿಯಲ್ಲಿದ್ದ ಅನುಭವವನ್ನು ಬಳಸಿಕೊಳ್ಳಲು ಯೋಚಿಸಲಾಗುತ್ತಿದೆ. ಒಂದೊಮ್ಮೆ ಇದು ಕಾರ್ಯ ಸಾಧ್ಯವಾದರೆ ನಿವೃತ್ತ ನೌಕರರು ಸಹ ವಾರ್ಡ್ ಸಭೆಯಲ್ಲಿ ತಮ್ಮ ಅನುಭವವನ್ನು ಧಾರೆ ಎರೆಯಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ನಗರಸಭೆ ಆಡಳಿತ ಜನರ ಮನೆ ಬಾಗಿಲಿಗೆ ಬರಲಿದೆ.
ನಗರದಲ್ಲಿ ದಿನದ 24 ಗಂಟೆ ನೀರು ಪೂರೈಸುವ ನೆಟ್ಕಲ್ ಯೋಜನೆಯಲ್ಲಿ ಪೈಪ್ ಅಳವಡಿಸುವ ಕಾಮಗಾರಿಯಿಂದಾಗಿ ಎಲ್ಲಾ ರಸ್ತೆಗಳು ಹಾಳಾಗಿವೆ. ಇಲ್ಲಿಯವರೆಗೂ 31 ವಾರ್ಡುಗಳಿಗೆ 24 ಗಂಟೆ ನೀರು ಪೂರೈಕೆ ವ್ಯವಸ್ಥೆ ಜಾರಿಗೆ ಬಂದಿಲ್ಲ. ತ್ಯಾಜ್ಯ ನಿರ್ವಹಣೆ ಸಮಸ್ಯೆ ಸಾಕಷ್ಟಿದೆ. ಬೀದಿ ದೀಪ, ಕುಡಿಯುವ ನೀರು ಹಾಗೂ ಇ- ಖಾತೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಇವುಗಳಿಗೆಲ್ಲ ಪರಿಹಾರ ದೊರಕಿಸಿಕೊಡಬೇಕಿದೆ. ಜೊತೆಗೆ ಸಂಪನ್ಮೂಲ ಕ್ರೂಡೀಕರಣಕ್ಕೂ ಒತ್ತು ನೀಡಬೇಕಿದೆ.ರಾಮನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ಉದ್ದೇಶ ಹೊಂದಲಾಗಿದೆ.
ವಾರ್ಡ್ ಸಭೆಗಳನ್ನು ಆಯೋಜಿಸುವ ಮೂಲಕ ರಾಮನಗರ ನಗರಸಭೆಯನ್ನು ಜನಸ್ನೇಹಿಯನ್ನಾಗಿಸುವ ಕಾರ್ಯ ಮಾಡಲಾಗುವುದು ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ.ಜಲಮಂಡಳಿ ಅಧಿಕಾರಿಗಳ ಸಭೆ:
ಜಿಲ್ಲಾ ಕೇಂದ್ರ ರಾಮನಗರದಲ್ಲಿ 24ಗಂಟೆ ನೀರು ಪೂರೈಸುವ ನೆಟ್ಕಲ್ ಯೋಜನೆ ಪ್ರಗತಿ ಸಂಬಂಧ ಜಲ ಮಂಡಳಿ ಅಧಿಕಾರಿಗಳೊಂದಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶೀಘ್ರದಲ್ಲಿಯೇ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.‘ನಗರಸಭೆ ಆಡಳಿತ ಯಂತ್ರವನ್ನು ಚುರುಕುಗೊಳಿಸುತ್ತೇನೆ. ವ್ಯವಸ್ಥೆಯಲ್ಲಿನ ಲೋಪಗಳನ್ನು ಅಧಿಕಾರ ಬಳಸಿ ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ವಾರ್ಡ್ ಜನರ ಕುಂದು ಕೊರತೆ ಬಗೆಹರಿಸುವ ಸಂಬಂಧ ಶೀಘ್ರದಲ್ಲಿಯೇ ವಾರ್ಡ್ ಸಭೆಗಳನ್ನು ಆಯೋಜಿಸಲಾಗುವುದು.’
- ಕೆ.ಶೇಷಾದ್ರಿ , ಅಧ್ಯಕ್ಷರು, ನಗರಸಭೆ ರಾಮನಗರ.