ಹೊಸಪೇಟೆ: ರಿಯಾಯಿತಿ ದರದಲ್ಲಿ ಗೃಹ ಬಳಕೆಗಾಗಿ ನೀಡಲಾಗುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ಬಳಕೆ ಮಾಡುವುದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮುಂದಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಾಣಿಜ್ಯ ಹಾಗೂ ಅಡುಗೆ ಸಿಲಿಂಡರ್ ಅಭಾವ ತಲೆದೋರಿದೆ. ಈ ಪರಿಸ್ಥಿತಿ ವಿಜಯನಗರ ಜಿಲ್ಲೆಯಲ್ಲಿ ಉಂಟಾಗದಿರಲಿ ಎಂಬ‌ ಉದ್ದೇಶದಿಂದ ಆಹಾರ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಆಹಾರ ನಿರೀಕ್ಷಕರು ಶನಿವಾರ ಜಿಲ್ಲೆಯಾದ್ಯಂತ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಹೋಟೆಲ್‌, ಬೇಕರಿ, ಫಾಸ್ಟ್ ಫುಡ್ ಸೆಂಟರ್‌, ಜನನಿಬಿಡ ಆಟೋ ಹಾಗೂ ಬಸ್ ನಿಲ್ದಾಣಗಳ ಬಳಿಯಿರುವ ಉಪಾಹಾರ ಮಂದಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಲೀಕರಿಗೆ ಗೃಹ ಬಳಕೆ ಸಿಲಿಂಡರ್‌ಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಂಡುಬಂದಲ್ಲಿ, ಅಂತಹ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ಆಹಾರ ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಎಚ್ಚರಿಕೆ ನೀಡಿದರು.

ಹೊಸಪೇಟೆ ತಾಲೂಕಿನಲ್ಲಿ ಶನಿವಾರ ಗೃಹ ಬಳಕೆ ಸಿಲಿಂಡರ್‌ಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.