ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಆಂತರಿಕ ಕಚ್ಚಾಟದಲ್ಲೇ ಎಲ್ಲವನ್ನೂ ಕಳೆದುಕೊಂಡ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಇದೀಗ ಪಂಚಮಸಾಲಿ ಸಮಾಜದ ಹೆಸರೂ ರಂಗ ಪ್ರವೇಶ ಮಾಡಿದ ಎರಡು ಆಡಿಯೋಗಳು ವೈರಲ್ ಆಗಿದ್ದು, ಯತ್ನಾಳ್ ಹಾಗೂ ಪಂಚಮಸಾಲಿ ಸಮಾಜದ ಗುರುಗಳ ಹೋರಾಟದ ವಿಚಾರ ಎಳೆ ತಂದಿದ್ದಕ್ಕೆ ಕೊಪ್ಪಳ ಮೂಲದ ಮುಖಂಡರೊಬ್ಬರು ಇಲ್ಲಿನ ಇಬ್ಬರು ಬಿಜೆಪಿ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆಡಿಯೋಗಳು ಬಿಡುಗಡೆಯಾಗಿವೆ.ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾತನಾಡಿದ್ದರಿಂದ ಆಕ್ರೋಶಗೊಂಡ ಕೊಪ್ಪಳ ಜಿಲ್ಲೆಯ ಪಂಚಮಸಾಲಿ ಮುಖಂಡ ಪಂಪನಗೌಡ ಎಂಬುವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಚನ್ನಗಿರಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನರ ಮೊಬೈಲ್‌ಗೆ ಕರೆ ಮಾಡಿ, ನಿಮ್ಮ ಸ್ವಾರ್ಥಕ್ಕಾಗಿ ಸಮಾಜ ಹಾಗೂ ಸಮಾಜದ ನಾಯಕರ ಬಗ್ಗೆ ಹಗುರವಾಗಿ ಮಾತನಾಡದಂತೆ ಎಚ್ಚರಿಸಿರುವ ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಗ್ರಾಮದ ಪಂಚಮಸಾಲಿ ಮುಖಂಡ ಪಂಪನಗೌಡ ಎಂಬುವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಡಾಳ್ ಮಲ್ಲಿಕಾರ್ಜುನಗೆ ಕರೆ ಮಾಡಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ, ಪಂಚಮಸಾಲಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್‌ರಿಗೆ ಪೊರಕೆ, ಒನಕೆಯಿಂದ ಹೆಣ್ಣು ಮಕ್ಕಳು ಹೊಡೆಯುತ್ತಾರೆಂದು ಹೇಳಿಕೆ ನೀಡಿದ್ದೀರಲ್ಲಾ, ಇನ್ನೊಂದು ಸಲ ಪಂಚಮಸಾಲಿ ಸಮಾಜ, ಬಸವನಗೌಡ ಪಾಟೀಲ ಯತ್ನಾಳ್ ಬಗ್ಗೆ ಮಾತನಾಡಿದರೆ ಚಪ್ಪಲಿ ಸೇವೆ ಮಾಡುತ್ತೇವೆ ಎಂದು ಪಂಪನಗೌಡ ಎಚ್ಚರಿಸಿದ ಆಡಿಯೋ ಈಗ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.ನಿಮಗೆ ತಾಕತ್ತಿದ್ದರೆ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿ. ನಮ್ಮ ಪಂಚಮಸಾಲಿ ಸಮಾಜದಿಂದಲೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು. ಯತ್ನಾಳರ ಬಗ್ಗೆ ನೀವ್ಯಾರು ಮಾತನಾಡೋಕೆ? ನೀವೆಲ್ಲಾ ಬಕೆಟ್ ರಾಜಕಾರಣಿಗಳು. ಇನ್ನೊಂದು ಸಲ ಯತ್ನಾಳ್‌ರ ಬಗ್ಗೆಯಾಗಲೀ, ಪಂಚಮಸಾಲಿ ಸಮಾಜದ ಬಗ್ಗೆಯಾಗಲೀ, ನಮ್ಮ ಗುರುಗಳ ಬಗ್ಗೆಯಾಗಲೀ, ನಮ್ಮ ಹೋರಾಟದ ಬಗ್ಗೆಯಾಗಲೀ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂಬುದಾಗಿ ಪಂಪನಗೌಡ ಗುಟುರು ಹಾಕಿದ್ದಾರೆ.
ಮತ್ತೊಂದು ಕಡೆ ಮಾಡಾಳ ಮಲ್ಲಿಕಾರ್ಜುನರಿಗೂ ಕರೆ ಮಾಡಿರುವ ಪಂಪನಗೌಡ, ಏನ್ರೀ ನಿಮ್ಮ ಕಥೆ? ನಿಮಗೆ ದಮ್ಮು, ತಾಕತ್ತಿದ್ದರೆ ನಿಮ್ಮ ಜಿಲ್ಲೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿ.ಯತ್ನಾಳ್ ಬಗ್ಗೆ ಹಗುರ ಮಾತನಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಏನು ಅನ್ಕೊಂಡಿದ್ದೀರಿ ನೀವು? ಸಮಾಜದ ಬಗ್ಗೆ ಕೆಟ್ಟ ಮಾತನಾಡುತ್ತೀರಾ? ಶ್ರೀಗಳು ಒಳ್ಳೆಯತನದಿಂದ ಗೌರವ ನೀಡುತ್ತಿದ್ದೇವೆ. ನೀವೇನು ಮಾಡಿದ್ದೀರಿ ಅಂತಾ ಇಡೀ ರಾಜ್ಯಕ್ಕೆ ಗೊತ್ತಿದೆ. ಏನು ಮಾತನಾಡುತ್ತಿದ್ದೀರಿ ನೀವು ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಏನು ಅರ್ಜೆಸ್ಟ್ ಮೆಂಟ್ ನಿಮ್ಮದು? ಇಡೀ ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರರಂತಹ ಸಂಸದರು ಸಿಗೋಕೆ ಪುಣ್ಯ ಮಾಡಿರಬೇಕು. ಅಂತಹವರನ್ನು ನೀವು, ನಿಮ್ಮ ನಾಯಕರೆನಿಸಿಕೊಂಡವರು ಹೊಂದಾಣಿಕೆ ಮಾಡಿಕೊಂಡು ಸೋಲಿಸಿದವರು. ರೀ ಸ್ವಾಮಿ ನಮ್ಮಲ್ಲಿ ದಾಖಲೆ ಇವೆ ಎಂಬುದಾಗಿ ಹೇಳುತ್ತಿದ್ದಂತೆ ಕರೆ ಸಂಪರ್ಕ ತಪ್ಪುತ್ತದೆ. ಹೀಗೆ ಕೊಪ್ಪಳ ಜಿಲ್ಲೆಯ ಪಂಪನಗೌಡ ಎಂಬುವರು ದಾವಣಗೆರೆ ಜಿಲ್ಲೆಯ ಇಬ್ಬರು ಬಿಜೆಪಿ ಮುಖಂಡರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಎರಡು ಆಡಿಯೋಗಳು ತೀವ್ರ ಸಂಚಲನ ಮೂಡಿಸಿವೆ.