ಸಾರಾಂಶ
ಬೆಂಗಳೂರು : ಕಳೆದ ಐದು ವರ್ಷಗಳಿಂದ ಒಂದೇ ಘಟಕ ಅಥವಾ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾಯಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಪೊಲೀಸ್ ಘಟಕಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಲ್ಲಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್(ಪಿಸಿ), ಹೆಡ್‌ಕಾನ್ಸ್‌ಟೇಬಲ್(ಎಚ್‌ಸಿ), ಸಹಾಯಕ ಸಬ್ ಇನ್ಸ್‌ಪೆಕ್ಟರ್(ಎಎಸ್‌ಐ)ಗಳು ಒಂದೇ ಘಟಕ ಅಥವಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಲು ಕನಿಷ್ಠ ಮತ್ತು ಗರಿಷ್ಠ ಅವಧಿ ನಿಗದಿಪಡಿಸಿ ಈಗಾಗಲೇ ವರ್ಗಾವಣೆಗೆ ಸೂಚಿಸಲಾಗಿದೆ. ಆದರೂ ಹಲವು ಘಟಕಗಳಲ್ಲಿ ಸಿಬ್ಬಂದಿಗಳು ಒಂದೇ ಘಟಕ ಅಥವಾ ಪೊಲೀಸ್ ಠಾಣೆಗಳಲ್ಲಿ ಐದು ವರ್ಷ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಗಾವಣೆಯಾದರೂ ಅದೇ ಠಾಣೆಗೆ ಎರವಲು ಸೇವೆ ಆಧಾರದ ಮೇಲೆ ನಿಯುಕ್ತಿಗೊಳಿಸುತ್ತಿರುವುದು ಕಂಡುಬಂದಿದೆ.
ಸಿಎಂ, ಗೃಹ ಸಚಿವರ ಸೂಚನೆ ಮೇರೆಗೆ ಕ್ರಮ: ಇತ್ತೀಚೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಒಂದೇ ಘಟಕ ಅಥವಾ ಪೊಲೀಸ್ ಠಾಣೆಗಳಲ್ಲಿ ಐದು ವರ್ಷ ಸೇವೆ ಸಲ್ಲಿಸಿರುವ ಪಿಸಿ ಹುದ್ದೆಯಿದ ಎಎಸ್‌ಐ ಹುದ್ದೆ ವರೆಗಿನ ಸಿಬ್ಬಂದಿ/ಅಧಿಕಾರಿಗಳನ್ನು ಕೂಡಲೇ ಬೇರೆ ಸ್ಥಳ ಅಥವಾ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಲು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷದ ಪೂರೈಸಿದ ಸಿಬ್ಬಂದಿ/ಅಧಿಕಾರಿಗಳನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಮುಂದುವರೆಸದಂತೆಯೂ ಸೂಚಿಸಿದ್ದಾರೆ. ಈ ಕುರಿತು ಏಳು ದಿನಗಳೊಳಗೆ ಕ್ರಮ ಕೈಗೊಂಡು ಕಚೇರಿಗೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಪೊಲೀಸ್ ಘಟಕಾಧಿಕಾರಿಗಳಿಗೆ ಸೂಚಿಸಿದ್ದಾರೆ.