ಸಿಎಂ ಕ್ಷೇತ್ರದಲ್ಲಿ ಗ್ರಾಮಸ್ಥರಿಗೆ ಧೂಳಿನ ಸ್ನಾನ.

| Published : Mar 05 2025, 01:32 AM IST

ಸಾರಾಂಶ

ಚುಂಚನಹಳ್ಳಿ ಗ್ರಾಮದಲ್ಲಿ ಯಥೇಚ್ಛವಾಗಿ ಧೂಳಿನ ಕಣಗಳು ಬರುತ್ತಿರುವುದರಿಂದ ಮಕ್ಕಳಿಗೆ, ವೃದ್ಧರಿಗೆ ಮತ್ತು ಮಹಿಳೆಯರಿಗೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಧೂಳಿನಿಂದ ಗ್ರಾಮಸ್ಥರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ, ಆದಷ್ಟು ಧೂಳಿನಿಂದ ಗ್ರಾಮಸ್ಥರು ದೂರವಿರಬೇಕು ಎಂದು ಮೈಸೂರು ಸ್ಪಂದನ ಹಾಸ್ಪಿಟಲ್ ನ ವೈದ್ಯ ಡಾ. ಅವಿನಾಶ್ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಮೈಸೂರು ವಿಶ್ವವಿದ್ಯಾಲಯ, ಮೈಸೂರು ಮಹಾರಾಜ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದಲ್ಲಿ ಗ್ರಾಮಸ್ಥರಿಗೆ ಮೈಸೂರಿನ ಡಾ. ಅಗರ್ವಾಲ್ಸ್

ಕಣ್ಣಿನ ಆಸ್ಪತ್ರೆ ಮೈಸೂರು, ಸ್ಪಂದನ ಹಾಸ್ಪಿಟಲ್ ವತಿಯಿಂದ ನಡೆದ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ ಮತ್ತು ಡಾ.ಪಿ.ಎಸ್. ಮಧುಸೂದನ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು , ಸ್ಪಂದನ ಹಾಸ್ಪಿಟಲ್ ನ ಡಾ. ಅವಿನಾಶ್ ಮತ್ತು ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಸಹಾಯಕ ವ್ಯವಸ್ಥಾಪಕ ನಿತಿನ್ ಅವರಿಂದ ಉಚಿತವಾಗಿ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ನಡೆಯಿತು. ತಪಾಸಣೆಯಲ್ಲಿ ಧೂಳಿನಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಡಾ. ಅವಿನಾಶ್ ಮಾತನಾಡಿ, ಚುಂಚನಹಳ್ಳಿ ಗ್ರಾಮದಲ್ಲಿ ಯಥೇಚ್ಛವಾಗಿ ಧೂಳಿನ ಕಣಗಳು ಬರುತ್ತಿರುವುದರಿಂದ ಮಕ್ಕಳಿಗೆ, ವೃದ್ಧರಿಗೆ ಮತ್ತು ಮಹಿಳೆಯರಿಗೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಹೆಚ್ಚಾಗಿ ಧೂಳು ಕಂಡುಬರುತ್ತದೆ. ಇದರಿಂದ ಚರ್ಮ ರೋಗವು ಹರಡುತ್ತದೆ. ಕಣ್ಣಿನ ಪೊರೆ ಸಮಸ್ಯೆ, ಧೂಳಿನಿಂದ ಸೋಂಕು, ಕಣ್ಣಿನಲ್ಲಿ ಉರಿಬರುವುದು, ಕಣ್ಣು ಕೆಂಪಾಗುವುದು, ನೀರು ಸೋರುವುದು ಇದು ಧೂಳಿನಿಂದ ಬರುವ ಲಕ್ಷಣವಾಗಿದೆ. ಧೂಳಿನಿಂದ ಅಲರ್ಜಿ ಬರುತ್ತದೆ. ಸ್ವಾಶಕೋಶಕ್ಕೆ ತೊಂದರೆಯಾಗುತ್ತದೆ. ಕೆಮ್ಮು ಮತ್ತು ಕಫ ಬರುತ್ತಿದ್ದು, ಸುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ರಸ್ತೆಯನ್ನು ಡಾಂಬರೀಕರಣ ಮಾಡಿದರೆ ಧೂಳಿನಿಂದ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶಾಲೆಯ ಪಕ್ಕದಲ್ಲಿಯೇ ಮುಖ್ಯರಸ್ತೆ ಹಾದು ಹೋಗಿರುವುದರಿಂದ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೂ ಧೂಳಿನ ಕಣಗಳು ಸೇರಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಗ್ರಾಮಸ್ಥರು ಧೂಳಿನಿಂದ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕು ಧೂಳಿನ ಸೋಂಕು ಬರುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ, ಡಾ.ಪಿ.ಎಸ್. ಮಧುಸೂಧನ್ , ಶಿಬಿರದ ನಾಯಕರಾದ ಭಾರ್ಗವ್, ಭಾಗ್ಯಲಕ್ಷ್ಮಿ, ವನಜಾಕ್ಷಿ, ಮೋಹನ್ ಭಾಗವಹಿಸಿದ್ದರು.