ಸಾರಾಂಶ
ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೆಪಿಎಂಇಎ ಕಾಯ್ದೆಯಡಿ ನೋಂದಣಿಯಾಗದೆ ಕಾರ್ಯ ನಿರ್ವಹಿಸುತ್ತಿರುವ ಕ್ಲಿನಿಕ್‍ಗಳಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದ್ದು, ಇದನ್ನು ಮುಂದುವರಿಸಿದರೆ ಕೆಪಿಎಂಇಎ ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡು ನಿರ್ದಾಕ್ಷಿಣ್ಯವಾಗಿ ಅಂತಹ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.ಪ್ರಸ್ತುತ ಜಿಲ್ಲೆಯಲ್ಲಿ ಹಲವು ಕ್ಲಿನಿಕ್‍ಗಳು/ ಖಾಸಗಿ ಸಂಸ್ಥೆಗಳು ಕೆಪಿಎಂಇಎ ಕಾಯ್ದೆಯ ಪ್ರಕಾರ ನೋಂದಣಿಯಾಗದ ಬಗ್ಗೆ ಐಎಡಿವಿಎಲ್ ನೀಡಿರುವ ದೂರಿನ ಅನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಕೆಪಿಎಂಇಎ ಕಾಯ್ದೆ ಪ್ರಕಾರ ತಂಡಗಳನ್ನು ರಚಿಸಿ, ಪರವಾನಗಿ/ ನೋಂದಣಿ ಇಲ್ಲದಿರುವ ಸಂಸ್ಥೆಗಳು, ಕ್ಲಿನಿಕ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ಸಂಸ್ಥೆಗಳು ನೋಂದಾಯಿಸದೆ ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಕೆಲವೊಂದು ಸಂಸ್ಥೆಗಳನ್ನು ಮುಚ್ಚಿಸಲು ಸೂಚಿಸಲಾಗಿದ್ದು, ಅವರಿಗೆ ನೋಟಿಸ್ ನೀಡಿ ನಿಗದಿತ ಅವಧಿಯೊಳಗೆ ಸರಿಪಡಿಸಲು ತಿಳಿಸಲಾಗಿದೆ.ಈಗಾಗಲೇ ದೇರಳಕಟ್ಟೆ ವ್ಯಾಪ್ತಿಯಲ್ಲಿ ಒಂದು ಸಂಸ್ಥೆ ಹಾಗೂ ಮಂಗಳೂರು ನಗರದಲ್ಲಿ ಒಂದು ಸಂಸ್ಥೆಯನ್ನು ಮುಚ್ಚಿಸಲಾಗಿದೆ. ಅಧಿಕಾರಿಗಳ ಭೇಟಿಯ ಸಂದರ್ಭ 10 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಕೆ.ಪಿ.ಎಂ.ಇ.ಎ ಕಾಯ್ದೆ ಉಲ್ಲಂಘನೆ ಮಾಡಿದಲ್ಲಿ ಶಾಶ್ವತವಾಗಿ ಸಂಸ್ಥೆಗಳನ್ನು ಮುಚ್ಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.