ವಸತಿ ಸೌಲಭ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

| Published : Mar 25 2024, 12:46 AM IST

ವಸತಿ ಸೌಲಭ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೇಳೆ ಪ್ರತಿ ಬಾರಿ ವಸತಿ ರಹಿತ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುತ್ತೇವೆ ಮತ್ತು ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಲಾಗುವುದೆಂದು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ವಸತಿ ಸೌಲಭ್ಯ ಕಲ್ಪಿಸದಿದ್ದರೆ ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕಾರ ಹಾಕುವುದಾಗಿ ನಗರದ ನೂರಾರು ವಸತಿ ರಹಿತ ಕುಟುಂಬಗಳು ಮತ್ತು ಸ್ಲಂ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ನಡೆದ ವಸತಿ ರಹಿತರ ಮತ್ತು ಸ್ಲಂ ನಿವಾಸಿಗಳ ಸಭೆಯಲ್ಲಿ ಸೇರಿದ ನೂರಾರು ವಸತಿ ರಹಿತರು ಮತ್ತು ಸ್ಲಂ ನಿವಾಸಿಗಳು ಈ ತೀರ್ಮಾನ ಕೈಗೊಂಡಿದ್ದಾರೆ.

ಈ ವೇಳೆ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, ನಗರದ ವಸತಿರಹಿತ ಕುಟುಂಬಗಳಿಗೆ ಮನೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ನಮ್ಮ ಭಾಗದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ವಸತಿ ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ ಮತ್ತು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ೨೦೧೭ ಹಾಗೂ ೨೦೨೩ರಲ್ಲಿ ಎರಡು ಬಾರಿ ನೂರಾರು ಜನರೊಂದಿಗೆ ಧರಣಿ ನಡೆಸಲಾಗಿದೆ. ಹೋರಾಟ ನಡೆಸಿ ಸಂವಿಧಾನಬದ್ಧವಾಗಿ ಸಾಮಾಜಿಕ ನ್ಯಾಯ ನೀಡುವಲ್ಲಿ ನಮ್ಮ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.

ಪ್ರತಿಭಟನೆ ವೇಳೆ ತಾತ್ಕಾಲಿಕವಾಗಿ ಶೀಘ್ರವೇ ಮನೆ ಹಂಚಿಕೆ ಮಾಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೇಳೆ ಪ್ರತಿ ಬಾರಿ ವಸತಿ ರಹಿತ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುತ್ತೇವೆ ಮತ್ತು ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಲಾಗುವುದೆಂದು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಈ ವರೆಗೂ ಮನೆಗಳನ್ನು ಹಂಚಿಕೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ೨೦೧೪ರಿಂದ ನೂರಾರು ವಸತಿ ರಹಿತ ಕುಟುಂಬಗಳು ತಮಗೆ ನ್ಯಾಯ ಕೊಡಿ ಎಂದು ನಿರಂತರವಾಗಿ ಕೇಳಿಕೊಂಡರೂ ಜನಪ್ರತಿನಿಧಿಗಳು ಮಾತ್ರ ಸ್ಲಂ ಜನರ ಮತ್ತು ಬಡವರ ನ್ಯಾಯಬದ್ಧ ಬೇಡಿಕೆಗೆ ಸ್ಪಂದಿಸದೇ ಅನ್ಯಾಯ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಕೂಡಲೇ ವಸತಿ ಸೌಲಭ್ಯ ಮತ್ತು ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸದಿದ್ದರೆ ಅವಳಿ ನಗರದ ನೂರಾರು ವಸತಿ ರಹಿತ ಕುಟುಂಬಗಳು ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದು, ನಗರದ ನೂರಾರು ಸ್ಲಂ ನಿವಾಸಿಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಮಾತನಾಡಿ, ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ವಸತಿ ರಹಿತ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುತ್ತೇವೆ. ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿ ನಮ್ಮ ಜನರಿಂದ ಮತ ಪಡೆದು ಗೆದ್ದು ಬರುವ ಪ್ರತಿನಿಧಿಗಳು ಚುನಾವಣೆ ನಂತರ ನಮ್ಮ ಜನರಿಗೆ ನೀಡಿದ ಭರವಸೆ ಮರೆತು ವಸತಿ ಮತ್ತು ಇತರ ಸೌಲಭ್ಯಗಳಿಂದ ವಂಚಿಸುತ್ತಿದ್ದಾರೆ. ಈಗಾಗಲೇ ಗಂಗಿಮಡಿಯಲ್ಲಿ ಸಾವಿರಾರು ಮನೆ ನಿರ್ಮಾಣ ಮಾಡಿದರೂ ನಮ್ಮ ವಸತಿ ರಹಿತ ಕುಟುಂಬ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮಕ್ತುಮಸಾಬ್‌ ಮುಲ್ಲಾನವರ, ಶಿವಾನಂದ ಶಿಗ್ಲಿ, ಮೆಹರುನ್ನಿಸಾ ಢಾಲಾಯತ, ಸಲೀಮ ಬೈರಕದಾರ, ದುರ್ಗಪ್ಪ ಮಣ್ಣವಡ್ಡರ, ಮೆಹರುನ್ನಿಸಾ ಡಂಬಳ, ಮಂಜುನಾಥ ಶ್ರೀಗಿರಿ, ರೇವಣಪ್ಪ ಲಕ್ಕುಂಡಿ, ದಾವಲಬಿ ಕೌತಾಳ, ಮಲೇಶಪ್ಪ ಕಲಾಲ, ವಿಶಾಲಕ್ಷಿ ಹಿರೇಗೌಡ್ರ, ಮೈಮುನ ಬೈರಕದಾರ, ಮೆಹಬೂಬಸಾಬ ಬಳ್ಳಾರಿ, ನಜಮುನಿಸಾ ಮುರಗೋಡ, ಪ್ರೇಮಾ ಚಿಂಚಲಿ, ಬಸವರಾಜ ಅಗಸಿಕೇರಿ ಹಾಗೂ ನೂರಾರು ವಸತಿ ರಹಿತರು ಮತ್ತು ಸ್ಲಂ ನಿವಾಸಿಗಳು ಇದ್ದರು.