ಅಂಕೋಲಾ ತಾಲೂಕಿನ ಹಟ್ಟಿಕೇರಿ ಪಂಚಾಯಿತಿ ವ್ಯಾಪ್ತಿಯ ಗುಳೆ, ಕೆಂದಿಗೆ, ಮಲೆಗದ್ದೆ, ಲಕ್ಕಿಗುಳಿ, ಶಿಕಳಿ, ತುರ್ಲಿ ಗ್ರಾಮಗಳಲ್ಲಿ ಮೂಲಸೌಲಭ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಅಂಕೋಲಾ: ರಸ್ತೆ ಅಭಿವೃದ್ಧಿ ಪಡಿಸುವಂತೆ ಹಟ್ಟಿಕೇರಿ ಪಂಚಾಯಿತಿ ವ್ಯಾಪ್ತಿಯ ಗುಳೆ, ಕೆಂದಿಗೆ, ಮಲೆಗದ್ದೆ, ಲಕ್ಕಿಗುಳಿ, ಶಿಕಳಿ, ತುರ್ಲಿ ಗ್ರಾಮದ ನಿವಾಸಿಗಳು ಅಂಕೋಲಾ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಘು ನಾಯ್ಕ ಮಾತನಾಡಿ, ಮೂಲಭೂತ ಸೌಕರ್ಯದಲ್ಲಿ ಒಂದಾದ ನಮಗೆ ರಸ್ತೆ ಸೌಲಭ್ಯವಿಲ್ಲದೆ, ಅತ್ಯಂತ ಹೀನಾಯ ಸ್ಥಿತಿಯಲ್ಲಿ ನಾವು ಬದುಕು ಸಾಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಗ್ರಾಮಕ್ಕೆ ತೆರಳಲು ಅನಾಧಿಕಾಲದಿಂದಲೂ ಮಣ್ಣಿನ ರಸ್ತೆ ಇದೆ. ಆದರೆ ಮಳೆಗಾಲದಲ್ಲಿ ಆ ರಸ್ತೆಯಲ್ಲಿ ಓಡಾಡಲೂ ಹಾಗೂ ಯಾವುದೇ ವಾಹನ ಚಲಾಯಿಸಲು ದುಸ್ತರವಾಗುತ್ತದೆ. ಇದನ್ನು ಮನಗಂಡು ಊರ ನಾಗರಿಕರು ಅನೇಕ ಮನವಿಯ ಬಳಿಕ ಕೈಗಾ ಅಣು ವಿದ್ಯುತ್ ಸ್ಥಾವರದವರು ರಸ್ತೆ ಅಭಿವೃದ್ಧಿ ಪಡಿಸಲು ಮುಂದೆ ಬಂದಿದ್ದಾರೆ. 11 ಜೂನ್‌ 2025ಗೆ ಪಂಚಾಯಿತಿಗೆ ಕೈಗಾ ಅಣು ವಿದ್ಯುತ್ ಸ್ಥಾವರದವರು ಪತ್ರ ನೀಡಿದ್ದಾರೆ. ಆದರೆ ಕೈಗಾದವರ ಪತ್ರ ಬಂದು 7 ತಿಂಗಳು ಕಳೆದರು ವಿವಿಧ ಇಲಾಖೆಯ ಸಮನ್ವಯ ಕೊರತೆಯಿಂದ ಇನ್ನು ಯಾವುದೇ ರಸ್ತೆ ಕೆಲಸ ಪ್ರಾರಂಭವಾಗಿಲ್ಲ. ಬೆತ್ತದ ಹಳ್ಳದಿಂದ ಗ್ರಾಮದ ರಸ್ತೆ ಅಭಿವೃದ್ಧಿಪಡಿಸಲು ತಾವು ಮಧ್ಯ ಪ್ರವೇಶಿಸಿ ವಿವಿಧ ಇಲಾಖೆಯ ಜತೆ ಸಮನ್ವಯ ಸಾಧಿಸಿ, ರಸ್ತೆ ಕಾಮಗಾರಿ ಅತಿ ಶೀಘ್ರದಲ್ಲಿ ನಡೆಸಿಕೊಡಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇವೆ. ಒಂದಾನುವೇಳೆ ಸ್ಪಂದಿಸದೆ ಇದ್ದಲ್ಲಿ ಈ ಎಲ್ಲ ಗ್ರಾಮದ ನಿವಾಸಿಗಳಾದ ನಾವು ಮುಂಬರುವ ಎಲ್ಲ ಚುನಾವಣೆಯಲ್ಲಿ ಮತ ಚಲಾಯಿಸದೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಮತ್ತು ಪ್ರತಿ ಗ್ರಾಮದ ಜನರು ಒಗ್ಗಟ್ಟಿನ ನಿರ್ಣಯ ಕೈಗೊಂಡಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸಂಜಯ್ ರಾಮ ನಾಯ್ಕ, ಮಧು ಗೌಡ, ಸುರೇಂದ್ರ ಗೌಡ, ಸುರೇಖಾ ಗೌಡ, ಸಂತೋಷ್ ಗೌಡ, ಸುರೇಶ ನಾರಾಯಣ ದಿನೇಶ ರಂಜನಾ, ವಿನಯ ಪಾಂಡುರಂಗ, ಪ್ರಮೋದ, ಉದಯ ಆನಂದ ಕಿರಾ ಬೀರ ಶಿವಾನಂದ ಮಂಜುನಾಥ ಉಪಸ್ಥಿತರಿದ್ದರು.