ರೈತರಿಗೆ ಹಣ ಜಮೆಯಾಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ

| Published : Mar 29 2024, 12:58 AM IST

ಸಾರಾಂಶ

ಅಧಿಕಾರಿಗಳ ಮಾತು ನಂಬಿ ನರೇಗಾದಲ್ಲಿ ಕಾಮಗಾರಿ ಮಾಡಿದ ರೈತರು ಸಾಲಗಾರರಾಗಿದ್ದಾರೆ. ಲಂಚ ಕೊಡದ ರೈತರ ಸಪ್ಲೆ ಬಿಲ್ ಮಂಜೂರಾತಿಗೆ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದೀರಿ. ಸಪ್ಲೆ ಬಿಲ್ ಹಣ ರೈತರ ಖಾತೆಗೆ ಜಮೆ ಮಾಡದಿದ್ದರೆ ನಾವು ಚುನಾವಣಾ ನೀತಿ ಸಂಹಿತೆ ಲೆಕ್ಕಿಸದೆ ಪ್ರತಿಭಟನೆ ಮಾಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ

ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಮಾಡಿದ ರೈತರ ಖಾತೆಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಸಾಮಗ್ರಿ ವೆಚ್ಚದ ಬಿಲ್ ಪಾವತಿಸದ ತಾಪಂ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಕಚೇರಿ ಎದುರು ಆಹೋರಾತ್ರಿ ಚಳವಳಿಗಿಳಿದ ರೈತಸಂಘದ ನೇತೃತ್ವದಲ್ಲಿ ನೂರಾರು ರೈತರು ಆಗಮಿಸಿದ್ದರು, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ರೂಪಶ್ರೀ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮುಖಾಮುಖಿ ಚರ್ಚಿಸಿದರು.

ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ. ರಾಜೇಗೌಡ ಮಾತನಾಡಿ, ನರೇಗಾ ಯೋಜನೆಯಡಿ ಕಾಮಗಾರಿ ನಡೆಸಿದ ರೈತರಿಗೆ ಕಳೆದ ನಾಲ್ಕು ವರ್ಷಗಳಿಂದ ಸಾಮಗ್ರಿ ವೆಚ್ಚದ ಬಿಲ್ ಪಾವತಿಯಾಗಿಲ್ಲ. ತೋಟಗಾರಿಕಾ ಇಲಾಖೆ ಮತ್ತು 34 ಗ್ರಾಪಂಗಳಿಂದ 8.10 ಕೋಟಿ ರು. ಸಪ್ಲೆ ಬಿಲ್ ರೈತರಿಗೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಮಾತು ನಂಬಿ ನರೇಗಾದಲ್ಲಿ ಕಾಮಗಾರಿ ಮಾಡಿದ ರೈತರು ಸಾಲಗಾರರಾಗಿದ್ದಾರೆ. ಲಂಚ ಕೊಡದ ರೈತರ ಸಪ್ಲೆ ಬಿಲ್ ಮಂಜೂರಾತಿಗೆ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದೀರಿ. ಸಪ್ಲೆ ಬಿಲ್ ಹಣ ರೈತರ ಖಾತೆಗೆ ಜಮೆ ಮಾಡದಿದ್ದರೆ ನಾವು ಚುನಾವಣಾ ನೀತಿ ಸಂಹಿತೆ ಲೆಕ್ಕಿಸದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ತಾಲೂಕಿನಲ್ಲಿ ತೀವ್ರ ಬರಗಾಲವಿದೆ, ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಕೂಡಲೇ ಬಡ್ಡಿ ಸೇರಿಸಿ ರೈತರಿಗೆ ಸಪ್ಲೆ ಬಿಲ್ ಹಣ ಹಾಕಬೇಕು. ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ರೈತರ ಅಹವಾಲು ಆಲಿಸಿದ ರೂಪಶ್ರೀ ಅವರು, ತಾಲೂಕಿನಲ್ಲಿ 1733 ರೈತರಿಗೆ ಸಪ್ಲೆ ಬಿಲ್ ಪಾವತಿಯಾಗಿಲ್ಲದಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಹಂತ ಹಂತವಾಗಿ ಎಲ್ಲಾ ಬಿಲ್ ಕ್ಲಿಯರ್ ಮಾಡಲಾಗುತ್ತಿದೆ ಎಂದು ರೈತರ ಅಹೋರಾತ್ರಿ ಚಳುವಳಿ ನಿಲ್ಲಿಸಲು ಯಶಸ್ವಿಯಾದರು.

ಈ ವೇಳೆ ತಾಪಂ ಇಒ ಬಿ.ಎಸ್.ಸತೀಶ್, ಅಭಿವೃದ್ಧಿ ಅಧಿಕಾರಿ ಡಾ.ನರಸಿಂಹರಾಜು, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ. ಲೋಕೇಶ್, ರೈತ ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಹೊನ್ನೇಗೌಡ, ಮಂಚನಹಳ್ಳಿ ನಾಗೇಗೌಡ, ನಗರೂರು ಕುಮಾರ್, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಹಿರೀಕಳೆ ಬಸವರಾಜು, ಚೌಡೇನಹಳ್ಳಿ ಕೃಷ್ಣೇಗೌಡ ಸೇರಿ ಹಲವರಿದ್ದರು.