ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಶ್ರಯ ಸಮಿತಿಯು ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸದಂತೆ ಆಗ್ರಹಿಸಿ ಪುರಸಭೆ ಆಡಳಿತ ಮಂಡಳಿಯ ಮಾಜಿ ಸದಸ್ಯರು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬ್ಯಾಡಗಿ: ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಶ್ರಯ ಸಮಿತಿಯು ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸದಂತೆ ಆಗ್ರಹಿಸಿ ಪುರಸಭೆ ಆಡಳಿತ ಮಂಡಳಿಯ ಮಾಜಿ ಸದಸ್ಯರು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಬಸವರಾಜ ಛತ್ರದ, ಕಳೆದ 2009ರಲ್ಲಿ ಬಿಜೆಪಿ ಸರ್ಕಾರ ಅರ್ಹ ಬಡವರಿಗೆ ಮನೆ ಹಂಚಿಕೆ ಮಾಡಿದ್ದನ್ನು ಬಿಟ್ಟರೇ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರ ಮನೆ ಹಂಚಿಕೆ ಮಾಡಿಲ್ಲ, ಬಳಿಕ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಸುಮಾರು 500ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದರು.ತರಾತುರಿ ನಿರ್ಧಾರ ಬೇಡ: ಬರುವ ಫೆ.2ರಂದು ಪುರಸಭೆಯಲ್ಲಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದ್ದು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ವಿರೋಧವಿದೆ, ಆದರೆ ಅಂದಿನ ಸಭೆಯಲ್ಲಿ ಫಲಾನುಭವಿಗಳ ಹೆಸರನ್ನು ಅಂತಿಮಗೊಳಿಸುವ ಕುರಿತು ವದಂತಿಗಳಿದ್ದು ಕೂಡಲೇ ಯಾವುದೇ ತರಾತುರಿ ನಿರ್ಧಾರ ತೆಗೆದುಕೊಳ್ಳದೇ ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಎಚ್ಚರಿಸಿದರು.ಮನೆ ಇದ್ದವರಿಗೇ ನಿವೇಶನ: ಕಳೆದ ವರ್ಷ ನಿವೇಶನ ಹಂಚಿಕೆಯನ್ನು ತರಾತುರಿಯಲ್ಲಿ ಮಾಡಿದ್ದು ಪುರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರಿಗೆ ತಿಳಿಸದೇ ಸಚಿವ ಜಮೀರ ಅಹ್ಮದ್ ಅವರನ್ನು ಕರೆಸಿ ಹಕ್ಕು ಪತ್ರ ನೀಡಲಾಗಿತ್ತು, ಸದರಿ ಪಟ್ಟಿಯಲ್ಲಿ ಮನೆ ಉಳ್ಳವರಿಗೂ ಮತ್ತು ಸತ್ತವರಿಗೂ ನಿವೇಶನ ಹಂಚಿಕೆ ಮಾಡಿ ಮುಜುಗರಕ್ಕೆ ಒಳಗಾಗಿದ್ದರು.ತೀವ್ರ ಹೋರಾಟದ ಎಚ್ಚರಿಕೆ: ಸುಭಾಸ್ ಮಾಳಗಿ ಮಾತನಾಡಿ, ಇದನ್ನ ಪ್ರಶ್ನಿಸಿ ನಿವೇಶನ ವಂಚಿತ ಬಡವರು ಪುರಸಭೆ ಎದುರು ಧರಣಿ ನಡೆಸಿದ ಪರಿಣಾಮ ಹಕ್ಕುಪತ್ರ ಹಂಚಿಕೆ ನಿಲ್ಲಿಸಿದ್ದಲ್ಲದೇ ಮನೆ ಇದ್ದವರನ್ನ ಪತ್ತೆ ಹಚ್ಚಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತಿರ್ಮಾನಿಸಲಾಗಿತ್ತು. ಸಾವಿರಾರು ಸಂಖ್ಯೆಯ ಬಡವರು ಪುರಸಭೆ ಮುಂಭಾಗದಲ್ಲಿ ಧರಣಿ ನಡೆಸಿದ್ದ ಸಂದರ್ಭದಲ್ಲಿ ಅಲ್ಲಿನ ಕೆಲವರಿಗೆ ನಾವೂ ಸಹ ಸಮಾಧಾನದ ಮಾತುಗಳನ್ನು ಹೇಳಿದ್ದೇವೆ, ಹೀಗಾಗಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನೆಗಳನ್ನು ಹಂಚಿಕೆ ಮಾಡಿದಲ್ಲಿ ನಿವೇಶನ ವಂಚಿತ ಫಲಾನುಭವಿಗ ಳೊಂದಿಗೆ ಪುರಸಭೆ ಎದುರು ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಪುರಸಭೆಯ ಮಾಜಿ ಸದಸ್ಯರಾದ, ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಮ್ಯಾಗೇರಿ, ಚಂದ್ರಣ್ಣ ಶೆಟ್ಟರ, ಮೆಹಬೂಬ ಅಗಸನಹಳ್ಳಿ, ಶಿವರಾಜ್ ಅಂಗಡಿ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ ಗಾಯತ್ರಿ ರಾಯ್ಕರ ಹಾಗೂ ಹಲವರು ಉಪಸ್ಥಿತರಿದ್ದರು.