ಸಾರಾಂಶ
ಶಿಗ್ಗಾಂವಿ: ವಸತಿ ಸೌಲಭ್ಯಕ್ಕಾಗಿ ಪುರಸಭೆ ವಂತಿಗೆ ಕಟ್ಟಿರುವ ಬಡ ಫಲಾನುಭವಿಗಳಿಗೆ ಎರಡು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಜಿ+೧ ಮನೆಗಳನ್ನು ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪುರಸಭೆ ಎದುರು ಮನೆ ನೀಡುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಎಚ್ಚರಿಸಿದ್ದಾರೆ.
ನಗರದ ಪುರಸಭೆ ಕಚೇರಿಯಲ್ಲಿ ಶನಿವಾರ ಜಿ+೧ ಮನೆ ಫಲಾನುಭವಿಗಳ ಹೋರಾಟ ಸಮಿತಿ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ವತಿಯಿಂದ ಪುರಸಭೆ ಅಧ್ಯಕ್ಷ ಹಾಗೂ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ನಗರದಲ್ಲಿ ವಾಸ ಮಾಡಲು ಮನೆಗಳಿಲ್ಲದ ಬಡಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವಾಸಯೋಗ್ಯ ಮನೆಗಳ ಸೌಲಭ್ಯಕ್ಕಾಗಿ ಹತ್ತು ಹನ್ನೆರಡು ವರ್ಷಗಳ ಹಿಂದೆ ಪುರಸಭೆಗೆ ಫಲಾನುಭವಿ ವಂತಿಗೆ ಹಣ ಕಟ್ಟಿ ಮನೆ ನೀಡುವಂತೆ ಮನವಿ ಮಾಡುತ್ತಿದ್ದಾರೆ. ೨೦೨೩ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ನಿರ್ಮಾಣಗೊಂಡಿರುವ ಮನೆಗಳನ್ನು ಉದ್ಘಾಟನೆ ಕೂಡ ಮಾಡಿದ್ದಾರೆ. ಆದರೂ ಮನೆಗಳನ್ನು ವಿತರಿಸದೇ ಬಡವರಿಗೆ ಸಂಕಷ್ಟ ಉಂಟು ಮಾಡುತ್ತಿರುವುದು ನೋವಿನ ಸಂಗತಿ ಎಂದರು.ಹಲವು ವರ್ಷಗಳಿಂದ ಹಣ ಕಟ್ಟಿರುವ ಬಡಜನರು ಮನೆ ಸಿಗುತ್ತದೆ ಎಂದು ಪುರಸಭೆಗೆ ಅಲೆದಾಡುತ್ತಲೇ ಇದ್ದಾರೆ. ಈಗ ಮನೆ ಕೊಡುತ್ತೇವೆ, ಆಗ ಮನೆ ಕೊಡುತ್ತೇವೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರ ಕೊಡುತ್ತಲೇ ಬರುತ್ತಿದ್ದಾರೆಯೇ ವಿನಃ ಮನೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳದಿರುವುದು ಖೇದಕರ ಸಂಗತಿ. ಬಡಜನರು ವಾಸ ಮಾಡಲು ನಿರ್ಮಾಣಗೊಂಡ ಮನೆಗಳು ಇದೀಗ ಖಾಲಿ ಬಿದ್ದಿರುವ ಪರಿಣಾಮ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿವೆ. ವಾಸಯೋಗ್ಯ ಮನೆಗಳು ಅನೈತಿಕ ಚಟುವಟಿಕೆ ತಾಣವಾಗಲು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಹೊಣೆಗಾರರು ಎಂದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಮಾತನಾಡಿ, ಮನೆ ವಿತರಣೆ ಮಾಡಲು ಪುರಸಭೆ ಸಿದ್ಧವಿದೆ. ಆದರೆ ಆಶ್ರಯ ಯೋಜನೆ ಸಮಿತಿಗೆ ಶಾಸಕರು ಅಧ್ಯಕ್ಷರಾಗಿದ್ದಾರೆ. ಗುತ್ತಿಗೆದಾರರು ಇದರಲ್ಲಿ ವಿಳಂಬ ಮಾಡುತ್ತಿದ್ದಾರೆ. ಫಲಾನುಭವಿಗಳಿಗೆ ಮನೆ ವಿತರಿಸಲು ಶಾಸಕರ ಜತೆಯಲ್ಲಿ ಈಗಾಗಲೇ ಚರ್ಚಿಸಿದ್ದೇವೆ. ಅದಾಗ್ಯೂ ಈ ವಿಷಯವನ್ನು ಶಾಸಕರ ಗಮನಕ್ಕೆ ತರುತ್ತೇವೆ. ಶಾಸಕರು ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಕೆ. ಮಲ್ಲೇಶ್ ಮಾತನಾಡಿ, ಶಾಸಕರು ಇನ್ನು ಕೆಲವೇ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯವನ್ನು ಅಂತಿಮಗೊಳಿಸಿ ಫಲಾನುಭವಿಗಳಿಗೆ ಮನೆ ವಿತರಿಸಲಾಗುವುದು ಎಂದರು.
ಜಿ+೧ ಮನೆ ಫಲಾನುಭವಿಗಳ ಹೋರಾಟ ಸಮಿತಿ ಹಾಗೂ ಡಿವೈಎಫ್ಐ ಮುಖಂಡರಾದ ವಿಠ್ಠಲ ಮಾಳೋಧೆ, ವೀರಣ್ಣ ಗಡ್ಡಿಯವರ, ಅಸ್ಮಾ ದೇವಸೂರು, ಭಾರತಿ ಪೂಜಾರ, ಕಿಶೋರ ದೋತ್ರದ, ಶಾಂತಕ್ಕ ಗಡ್ಡಿಯವರ, ಮಂಜುಳಾ ತಡಸ, ದಾಯಿ ಹಲೀಮಾ ನವಲಗುಂದ, ಪಾವನಾ ಮ್ಯಾದರ, ಸಾವಿತ್ರಿ ಚೌಹಾಣ, ಕಸ್ತೂರಿ ಗಣೇಶ ವಡ್ಡರ, ಗಾಯಿತ್ರಿ ಮಾಳೋಧೆ, ಮೌಲಾಲಿ ನವಲಗುಂದ, ನಾರಾಯಣ ಶಿಡ್ಲಾಪುರ, ಅಲ್ಲಾವುದ್ದೀನ್ ಜಮಾದಾರ, ಮಧುಕರ ಕೇದಾರಿ, ನಾಸೀರ್ ಬಡಿಗೇರ, ಹೊನ್ನವ್ವ ಹೋತನಳ್ಳಿ, ಹನುಮಂತಪ್ಪ ತಡಸಿನಕೊಪ್ಪ ಉಪಸ್ಥಿತರಿದ್ದರು.