ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ನಿಮ್ಮ ಮಗುವಿಗೆ ಬೀದಿ ನಾಯಿ ಕಡಿದರೆ ನಾವು ಜವಾಬ್ದಾರರಲ್ಲ. ಶಾಲೆಯ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದರೂ ನಿಮ್ಮ ಮಕ್ಕಳನ್ನು ನೀವೇ ಜೋಪಾನದಿಂದ ಶಾಲೆಗೆ ತಂದು ಬಿಡಬೇಕು.ಹೌದು, ಹೀಗಂತ ನಗರದ ಬಿಸಿ ಪಾಟೀಲ್ ರಸ್ತೆಯಲ್ಲಿರುವ ಖಾಸಗಿ ಶಾಲೆಯೇ ಇಂಥದ್ದೊಂದು ಸುತ್ತೋಲೆ ಹೊರಡಿಸಿ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ, ಮುಖ್ಯೋಪಾಧ್ಯಾಯರ ರುಜು ಇರುವ ಮುಚ್ಚಳಿಕೆ ಪತ್ರಕ್ಕೆ ಪಾಲಕರ ಸಹಿ ಮಾಡಿಕೊಂಡು ಬರುವಂತೆ ಮಕ್ಕಳ ಕೈಯಲ್ಲಿ ಕಳುಹಿಸಿದೆ.
ವಾರದಲ್ಲಿಯೇ ನಾಲ್ಕಾರು ನಾಯಿ ಕಚ್ಚಿದ ಪ್ರಕರಣಗಳು ನಡೆದಿದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯರು ಇಂಥದ್ದೊಂದು ಸುತ್ತೋಲೆ ಹೊರಡಿಸಿದ್ದಾರೆ.ನಮ್ಮ ಶಾಲೆಯ ಬಳಿ ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳಿವೆ. ಅದರಲ್ಲೂ ಶಾಲೆಗೆ ಬರುವ ಎಸ್‌ಬಿಐ ಬ್ಯಾಂಕಿನ ವೃತ್ತದಲ್ಲಿ ಬೀದಿ ನಾಯಿಗಳ ಗುಂಪೇ ಇರುತ್ತದೆ. ಇದರಿಂದ ನಮಗೂ ಆತಂಕವಾಗಿದೆ. ಹೀಗಾಗಿ, ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಜೋಪಾನವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅಷ್ಟೇ ಅಲ್ಲ, ಮಕ್ಕಳ ಕೈಲಿ ಕುರುಕಲು ತಿನಿಸು ಸೇರಿದಂತೆ ಯಾವುದೇ ತಿಂಡಿಗಳನ್ನು ಕಳುಹಿಸಕೂಡದು. ಮಕ್ಕಳು ಮೈಮರೆತು ಅವುಗಳನ್ನು ತಿನ್ನುವಾಗಲೇ ನಾಯಿಗಳು ದಾಳಿ ಮಾಡುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಕೈಚೆಲ್ಲಿದ ಅಧಿಕಾರಿಗಳುಈ ಸುತ್ತೋಲೆಯಿಂದ ಪಾಲಕರು ಆತಂಕಗೊಂಡಿದ್ದಾರೆ. ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವ ಅಗತ್ಯವಿದೆ ಎಂದು ನಗರಸಭೆ ಸದಸ್ಯ ರಾಜಶೇಖರ ಆಡೂರು ಅವರ ಬಳಿ ಹೋಗಿದ್ದಾರೆ. ಆಡೂರು ಅವರು ತಕ್ಷಣ ನಗರಸಭೆ ಪೌರಾಯುಕ್ತರಿಗೆ ಕರೆ ಮಾಡಿ, ಬೀದಿ ನಾಯಿಗಳನ್ನು ನಿಯಂತ್ರಣ ಮಾಡಿ ಎಂದಿದ್ದಾರೆ. ಆದರೆ, ನಗರಸಭೆ ಪೌರಾಯುಕ್ತರು ಬೀದಿ ನಾಯಿಗಳನ್ನು ನಾವು ನಿಯಂತ್ರಣ ಮಾಡಲು ಬರುವುದಿಲ್ಲ, ಅರಣ್ಯ ಇಲಾಖೆಯವರು ಮಾಡಬೇಕು ಎಂದಿದ್ದಾರೆ. ಅರಣ್ಯ ಇಲಾಖೆಯವರಿಗೆ ಕರೆ ಮಾಡಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರಿಂದ ನಗರಸಭೆ ಸದಸ್ಯ ರಾಜಶೇಖರ ಆಡೂರು ಅವರು ಕೈ ಚೆಲ್ಲಿದ್ದಾರೆ.
ಕಂಗಾಲಾದ ಪಾಲಕರುನಗರಸಭೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆಯಿಂದ ಪಾಲಕರು ಕಂಗಾಲಾಗಿದ್ದಾರೆ. ನಾವೇನು ಮಾಡಬೇಕು? ನಮ್ಮ ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸಬೇಕು? ಶಾಲೆಯ ಮುಖ್ಯೋಪಾಧ್ಯಾಯರು ಪತ್ರ ಬರೆದಿದ್ದಾರೆ. ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ. ಹೀಗಾದರೆ ಈ ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವುದಾದರೂ ಯಾರು? ಎನ್ನುವುದು ಪಾಲಕರ ಪ್ರಶ್ನೆ.ಸ್ಪಂದನೆ ಇಲ್ಲ
ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ನಿಮ್ಮ ಮಕ್ಕಳನ್ನು ನೀವೇ ಜೋಪಾನ ಮಾಡಿಕೊಳ್ಳಿ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಹೇಳಿದ್ದಾರೆ. ಇತ್ತ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶ ಮಾಡಿ, ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕು.ಶಬ್ಬೀರ್ ಸಿದ್ಧಿಕಿ, ಪಾಲಕರು