ಭವಾನಿ ರೇವಣ್ಣ ಬಂಧನಕ್ಕೆ ವಾರಂಟ್‌

| Published : Jun 07 2024, 12:34 AM IST / Updated: Jun 07 2024, 01:12 PM IST

bhavani revanna

ಸಾರಾಂಶ

ತಮ್ಮ ಪುತ್ರನ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿದೆ.

 ಬೆಂಗಳೂರು :  ತಮ್ಮ ಪುತ್ರನ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿದೆ.

ಈ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಭವಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಅವರು ಪತ್ತೆಯಾದ ತಕ್ಷಣವೇ ಬಂಧನಕ್ಕೊಳಗಾಲಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕೈಗೆ ಸಿಗದೆ ನಾಪತ್ತೆಯಾಗಿರುವ ಭವಾನಿಗೆ ಎಸ್‌ಐಟಿ ತೀವ್ರ ಶೋಧ ನಡೆಸಿದೆ. ಆದರೂ ಅವರ ಸುಳಿವು ಮಾತ್ರ ಸಿಗುತ್ತಿಲ್ಲ.

ಅಪಹರಣ ಪ್ರಕರಣದ ವಿಚಾರಣೆಗೆ ನೋಟಿಸ್ ನೀಡಿದ್ದರೂ ಭವಾನಿ ಹಾಜರಾಗಿಲ್ಲ. ಹೀಗಾಗಿ ತನಿಖೆಗೆ ಅಸಹಕಾರ ತೋರಿದ ಕಾರಣಕ್ಕೆ ಬಂಧನ ವಾರಂಟ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಎಸ್ಐಟಿ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಭವಾನಿ ವಿರುದ್ಧ ವಾರಂಟ್ ಜಾರಿಗೊಳಿಸಿ ಆದೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜ್ವಲ್‌ ರೇವಣ್ಣ ಮತ್ತೆ 4 ದಿನ ಎಸ್‌ಐಟಿ ಕಸ್ಟಡಿಗೆ:

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ಮತ್ತೆ ವಿಶೇಷ ತನಿಖಾ ದಳವು (ಎಸ್‌ಐಟಿ) ಗುರುವಾರ ವಶಕ್ಕೆ ಪಡೆದಿದೆ.

ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ವಿಚಾರಣೆ ಸಲುವಾಗಿ ಆರೋಪಿಯನ್ನು ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಜೂ.10ರವರೆಗೆ ಪ್ರಜ್ವಲ್‌ರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಬಳಿಕ ನ್ಯಾಯಾಲಯ ಕಲಾಪ ಮುಗಿಸಿ ಸಿಐಡಿ ಕಚೇರಿಗೆ ಕರೆತಂದು ಮಾಜಿ ಸಂಸದರನ್ನು ಎಸ್ಐಟಿ ವಿಚಾರಣೆ ಮುಂದುವರೆಸಿದೆ.ಅತ್ಯಾಚಾರ ಪ್ರಕರಣದ ಮಹಜರ್‌ ಸಂಬಂಧ ಹಾಸನ ಜಿಲ್ಲೆ ಪ್ರಜ್ವಲ್ ಅವರನ್ನು ಎಸ್‌ಐಟಿ ಕರೆದೊಯ್ಯುವ ಸಾಧ್ಯತೆಯಿದೆ. ಅತ್ಯಾಚಾರ ಕೃತ್ಯ ನಡೆದಿದೆ ಎನ್ನಲಾದ ಹಾಸನ ನಗರದಲ್ಲಿರುವ ಸಂಸದರ ಅತಿಥಿ ಗೃಹ ಹಾಗೂ ಹೊಳೆನರಸೀಪುರದ ಮಾಜಿ ಸಂಸದರ ಮನೆ ಮಾತ್ರವಲ್ಲದೆ ಅವರಿಗೆ ಸೇರಿದ ತೋಟದ ಮನೆಗಳಲ್ಲಿ ಮಹಜರ್ ನಡೆಯಲಿದೆ ಎನ್ನಲಾಗಿದೆ.

ಪ್ರಜ್ವಲ್‌ ಕೇಸ್‌: ಹಾಸನ ಮಾಜಿ ಎಸ್ಪಿಗೆ ಎಸ್‌ಐಟಿ ತನಿಖೆ ಬಿಸಿ:

ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದ ಹಿಂದಿನ ಪೊಲೀಸ್ ಅಧಿಕಾರಿಗಳಿಗೆ ಎಸ್ಐಟಿ ತನಿಖೆ ಬಿಸಿ ತಟ್ಟಿದೆ.ಈ ಲೈಂಗಿಕ ಶೋಷಣೆ ಬಗ್ಗೆ ಮಾಹಿತಿ ಹೊಂದಿದ್ದರು ಎಂಬ ಶಂಕೆ ಮೇರೆಗೆ ಹಾಸನ ಜಿಲ್ಲೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ. ಈಗಾಗಲೇ ಮೂರು ವರ್ಷಗಳ ಹಿಂದೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಐಪಿಎಸ್ ಅಧಿಕಾರಿ ಶ್ರೀನಿವಾಸ್ ಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ಪ್ರಸ್ತುತ ಬೆಂಗಳೂರು ನಗರದ ಸಿಸಿಬಿ ಡಿಸಿಪಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.ಕಳೆದ ನಾಲ್ಕೈದು ವರ್ಷಗಳಿಂದ ಮಹಿಳೆಯರನ್ನು ಲೈಂಗಿಕವಾಗಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಶೋಷಣೆ ಮಾಡುತ್ತಿದ್ದರು. ಈ ಕೃತ್ಯಗಳ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕಾನೂನು ಕ್ರಮ ಜರುಗಿಸಿರಲಿಲ್ಲ ಎಂಬ ಆರೋಪವಿದೆ.ದೂರುದಾರೆಯೇ ವಿಡಿಯೋದಲ್ಲಿ ಪ್ರಚೋದಿಸುತ್ತಿದ್ದಳು: ದೇವರಾಜೇಗೌಡ

ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವ ವಕೀಲ ಜಿ.ದೇವರಾಜೇಗೌಡ, ದೂರುದಾರೆ ಮತ್ತವರ ಪತಿ ನನ್ನ ಮೇಲೆ ಮಾಟ ಮಂತ್ರ ಮಾಡಿಸಿ ವಶೀಕರಿಸಿಕೊಂಡಿದ್ದರು. ದೂರುದಾರೆಯೇ ವಿಡಿಯೋ ಕಾಲ್‌ ಮಾಡಿ ತನ್ನ ಖಾಸಗಿ ಅಂಗಗಳನ್ನು ತೋರಿಸಿ ಕಾಮ ಪ್ರಚೋದನೆ ಮಾಡುತ್ತಿದ್ದಳು. ನಂತರ ಆ ವಿಡಿಯೋ ಮುಂದಿಟ್ಟುಕೊಂಡು ಎರಡು ಕೋಟಿ ರು. ನೀಡುವಂತೆ ಬ್ಲಾಕ್‌ಮೇಲ್‌ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಹೊಳೆನರಸೀಪುರ ಠಾಣಾ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕಾಮಸಮುದ್ರ ಗ್ರಾಮದ ಜಿ. ದೇವರಾಜೇಗೌಡಗೆ ಜಾಮೀನು ನಿರಾಕರಿಸಿ ಜೂ.5ರಂದು ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಹೀಗಾಗಿ ದೇವರಾಜೇಗೌಡ ಜಾಮೀನು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿಯಲ್ಲಿ ಹೊಳೆನರಸೀಪುರದ ಟೌನ್‌ ಠಾಣೆಯ ಇನ್ಸ್‌ಪೆಕ್ಟರ್‌ ಮತ್ತು ದೂರುದಾರೆ ಮಹಿಳೆಯನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆಯಿದೆ.ದೂರುದಾರ ಮಹಿಳೆ ನಿವೇಶನ ಮಾರಾಟ ವಿಚಾರವಾಗಿ ನನ್ನ ಸಂಪರ್ಕಿಸಿದ್ದರು. ನನ್ನ ಮೊಬೈಲ್‌ ನಂಬರ್‌ ಪಡೆದು ಸಂದೇಶ ಕಳುಹಿಸಿದ್ದರು. ಕೆಲ ಕಾಲದ ನಂತರ ನನ್ನ ಕಚೇರಿಗೆ ಆಕೆ ಮತ್ತು ಆಕೆಯ ಪತಿ ಭೇಟಿ ನೀಡಿದ್ದರು. ನನ್ನ ಮೇಲೆ ಮಾಟ ಮಂತ್ರ ಮಾಡಿಸಿದ್ದರು. ಕಚೇರಿ ಬಾಗಲಿಗೆ ನಿಂಬೆಹಣ್ಣು ಇರಿಸಿ, ಕುಂಕುಮ-ಅರಿಶಿನ ಹಚ್ಚಿ ಪೂಜೆ ಸಲ್ಲಿಸಿದ್ದರು. ದೂರುದಾರೆ ನನ್ನ ಹಣೆಗೆ ಕುಂಕುಮ ಹಚ್ಚಿದರು. ಆಗ ನನಗೆ ತಲೆತಿರುಗಿ ಬುದ್ಧಿ ಭ್ರಮಣೆಯಾದಂತಾಯಿತು. ನಂತರ ದೂರುದಾರೆ ನನಗೆ ವಿಡಿಯೋ ಕಾಲ್‌ ಮಾಡಿ ತನ್ನ ಖಾಸಗಿ ಅಂಗ ತೋರಿಸುತ್ತಿದ್ದಳು. ಇತರೆ ಮಹಿಳೆಯರನ್ನು ತೋರಿಸಿ ಲೈಂಗಿಕ ಪ್ರಚೋದನೆ ನೀಡುತ್ತಿದ್ದರು. ಮಾಟಮಂತ್ರದಿಂದ ನಾನು ಬಲಿಪಶುವಾದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ದೂರುದಾರೆ ಮತ್ತವರ ಗಂಡ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡು ಕಳ್ಳಾಟವಾಡುತ್ತಿರುವ ಬಗ್ಗೆ ಅನುಮಾನ ಮೂಡಿತು. ಅದಕ್ಕಾಗಿ ಆಕೆಯ ವಿಡಿಯೋ ರೆಕಾರ್ಡ್‌ ಮಾಡಿಕೊಂಡೆ. ಮರುದಿನ ನಾನು ಅನಾರೋಗ್ಯಕ್ಕೆ ಗುರಿಯಾದೆ. ಆ ಮೇಲೆ ನಾನು ಮಾಟಮಂತ್ರದಿಂದ ವಶೀಕರಣಕ್ಕೆ ಒಳಗಾಗಿದ್ದೇನೆ ಎಂಬುದು ನನಗೆ ಅರ್ಥವಾಯಿತು. ನಂತರ ಅನಾಮಧೇಯ ವ್ಯಕ್ತಿ ನನಗೆ ಕರೆ ಮಾಡಿ ಎರಡು ಕೋಟಿ ಹಣ ನೀಡಬೇಕು. ಇಲ್ಲವಾದರೆ ನಿನ್ನ ಅಶ್ಲೀಲ ಪೋಟೋ-ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ನಲ್ಲಿ ಮಾಡುವುದಾಗಿ ಬೆದರಿಕೆ ಹಾಕಿದರು. ಈ ಬಗ್ಗೆ ನಾನು ಬೆಂಗಳೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದ್ದೆ ಎಂದು ತಿಳಿಸಿದರು.

ಆ ದೂರಿನ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗಿದ್ದ ದೂರುದಾರೆಯು ನನ್ನ ಮೇಲೆ ಯಾವುದೇ ಆರೋಪ ಮಾಡಿಲ್ಲ. ನಂತರ ಏ.4ರಂದು ಆಕೆ ನನ್ನ ವಿರುದ್ಧ ದೂರು ದಾಖಲಿಸಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ತಾನು ಅಮಾಯಕನಾಗಿದ್ದು, ಸುಳ್ಳು ಆರೋಪ ಮಾಡಿ ನನ್ನ ಸಿಲುಕಿಸಲಾಗಿದೆ. ನನ್ನ ವಿರುದ್ಧ ಪೊಲೀಸರು ಹಾಗೂ ದೂರುದಾರೆ ದುರುದ್ದೇಶ ಹೊಂದಿದ್ದಾರೆ. ಈ ಎಲ್ಲ ಅಂಶ ಪರಿಗಣಿಸಿ ಜಾಮೀನು ನೀಡಬೇಕು ಎಂದು ದೇವರಾಜೇಗೌಡ ಅರ್ಜಿಯಲ್ಲಿ ಕೋರಿದ್ದಾರೆ.