ಕುಮಾರಪಟ್ಟಣ: ವ್ಯಾಮೋಹ ಬಂತೆಂದರೆ ಮನುಷ್ಯ ತುಂಬಾ ಸ್ವಾರ್ಥಿಯಾಗುತ್ತಾನೆ. ಸಮಾಜದಲ್ಲಿ ಕಂಠಕನಾಗುತ್ತಾನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಹಾಗೂ ಟಿವಿಗಳಲ್ಲಿ ತಾವು ನೋಡ್ತಾ ಇರಬಹುದು. ಅಮೆರಿಕ, ಇಸ್ರೆಲ್, ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಇಂದು ಯುದ್ಧ ನಡೆಯುತ್ತಿದೆ. ಇದಕ್ಕೆ ಮಾನವನ ವ್ಯಾಮೋಹವೆ ಮೂಲ ಕಾರಣ ಎಂದು ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಪಟ್ಟಾಧ್ಯಕ್ಷರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ರಾಣಿಬೆನ್ನೂರು ತಾಲೂಕು ಚಳಗೇರಿಯ ಲಿಂ.ಡಾ. ಮಹಾಂತೇಶ್ವರ ಸ್ವಾಮಿಗಳ ಶ್ರೀಮಠದಲ್ಲಿ ಮಂಗಳವಾರ ನಡೆದ ಗುರುಗಳ ನೂತನ ಕೈಲಾಸ ಮಂದಿರ ಉದ್ಘಾಟನೆ. ಪೂಜ್ಯರ ಅಮೃತ ಶಿಲಾಮೂರ್ತಿ, ಪಂಚಲೋಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕೈಲಾಸ ಮಂದಿರದ ಕಳಸಾರೋಹಣ, ನಾಗದೇವತಾ ಮೂರ್ತಿಗಳಿಗೆ ಪೂಜಾ ಅಭಿಷೇಕ ಮತ್ತು ಧಾರ್ಮಿಕ ವಿಧಿ ವಿಧಾನಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅವರು ಆಶೀರ್ವಚನ ನೀಡಿದರು.ಆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತದಲ್ಲಿ ಯಾಕೆ ಶಾಂತಿ ಇದೆ ಎಂದರೆ ಇಲ್ಲಿ ಧರ್ಮ ಇದೆ. ನಮ್ಮಂತ ಗುರುಗಳು, ಪೀಠಗಳು ಇವೆ. ತಪ್ಪು ಮಾರ್ಗದಲ್ಲಿ ನಡೆದರೆ ನಾವು ಬುದ್ಧಿ ಹೇಳುತ್ತೇವೆ.ನಿಮ್ಮಂತ ಭಕ್ತರ ಬೆಂಬಲವೂ ಸ್ವಾಮಿಗಳಿಗೆ ಸದಾ ಇದೆ. ಸಮಾಜದಲ್ಲಿ ಒಳ್ಳೆಯದನ್ನೇ ಮಾಡಬೇಕು ಹೊರತು ಮಠವನ್ನು ದೊಡ್ಡದನ್ನಾಗಿ ಮಾಡಬೇಕೆಂದು ಭಾವಿಸಬೇಡಿ. ಬದಲಾಗಿ ಕಾಯಕವೇ ಕೈಲಾಸ ಎಂಬ ತತ್ವವನ್ನು ನಂಬಿಕೊಂಡು, ಭಿಕ್ಷಾಟನೆಯ ದಾರಿ ಹಿಡಿಯದೆ, ತಾವು ದುಡಿದಂತ ಒಂದು ದಿವ್ಯಚೇತನದಲ್ಲಿ ನೀವು ಹೋಗಬೇಕು ಎಂದರು. ಸಾನಿಧ್ಯವಹಿಸಿದ್ದ ಚನ್ನಗಿರಿ ತಾಲೂಕು ವಡ್ನಾಳು ವಿಶ್ವಕರ್ಮ ಮಹಾ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ಮಾತನಾಡಿ, "ತುಂಬಿದ ಕೂಡ ಎಂದೆಂದೂ ತುಳುಕುವುದಿಲ್ಲ. ಖಾಲಿ ಕೊಡವು ಸಹ ತುಳುಕುವುದಿಲ್ಲ” ಅದೇ ರೀತಿ ತುಂಬಿದ ಸಭೆಯಲ್ಲಿಯೂ ಗದ್ದಲವಿಲ್ಲವೆಂದರೆ, ಮಹಾಂತೇಶ್ವರ ಸ್ವಾಮಿಗಳು ತುಂಬಿದಕೊಡವಿದ್ದಂತೆ. ಏಕೆಂದರೆ ತುಂಬಾ ಸರಳವಾದ ಜೀವನ ಅವರದು. ಜೀವನದಲ್ಲಿ ಏನೂ ಅಪೇಕ್ಷೆ ಪಡದೆ, ಸಾವಿರಾರು ಜನ ಭಕ್ತರ ಆರಾಧ್ಯ ದೈವ ಎಂದರೆ ತಪ್ಪಾಗಲಾರದು. ಸ್ವಾಮಿಗಳು ದೇಹದಿಂದ ದೂರವಾದರೂ ಸಹ ನಿಮ್ಮೂರಿನ ಸುತ್ತಲೂ ನಿಮ್ಮೆಲ್ಲರ ಹೃದಯದಲ್ಲಿ ಅಡಗಿದ್ದಾರೆ. ಸ್ವಾಮಿಗಳ ನಿಷ್ಠೆ, ಸರಳ ಜೀವನ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿರಿ ಎಂದು ತಿಳಿ ಹೇಳಿದರು.ಗೋಕಾಕ್ ತಾಲೂಕು ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳ ಕೈಲಾಸ ಮಂದಿರ ಉದ್ಘಾಟಿಸಿದರು. ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿತು, ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಕೈಲಾಸ ಮಂದಿರದ ಗೋಪುರದ ಕಳಸಾರೋಹಣ ಕಾರ್ಯಕ್ರಮ ಜರುಗಿತು.ಖಂಡೇರಾಯನಹಳ್ಳಿಯ ಆರೂಢ ತಪೋಭೂಮಿಯ ಗುರು ನಾಗರಾಜನಂದ ಮಹಾಸ್ವಾಮಿಗಳು, ರಾಣಿಬೆನ್ನೂರಿನ ವಿರಕ್ತಮಠದ ಗುರು ಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಾ. ಮಹಾಂತೇಶ್ವರ ಮಹಾಸ್ವಾಮಿಗಳ ನೂತನ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನುರಾಮದುರ್ಗದ ಅವರಾದಿ ಫಲಹಾರೇಶ್ವರ ಸಂಸ್ಥಾನ ಮಠದ ಶಿವಮೂರ್ತಿ ಮಹಾಸ್ವಾಮಿಗಳು ವಹಿಸಿದ್ದರು. ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಹಾವೇರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಮಂಜುನಾಥ ಗೌಡಶಿವಣ್ಣನವರ, ರಾಣಿಬೆನ್ನೂರು ತಾಲೂಕು ತಹಸಿಲ್ದಾರ್ ಭಗವಾನ್, ಚಳಗೇರಿ ಗ್ರಾಮ ಲೆಕ್ಕಾಧಿಕಾರಿ ಎ.ಸಿ. ರುದ್ರೇಶ್, ಮುಖಂಡರುಗಳಾದ ಸಣ್ಣತಮ್ಮಪ್ಪ ಬಾಕಿ, ಜಟ್ಟೆಪ್ಪಕರೇಗೌಡರ್, ಮೌಲಾಸಾಬ್ ಫ್ಲಾಟ್, ರಾಯಪ್ಪ ತೆಂಬದ ಆಗಮಿಸಿದ್ದರು. ನೇತ್ರಾವತಿ ಯತ್ತಿನಮನಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಹನುಮಂತಪ್ಪ ಕನ್ನಮ್ಮನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಸೋಮನಗೌಡರ್ ಕಾರ್ಯಕ್ರಮ ನಿರೂಪಿಸಿದರು.