ಪೊಲೀಸರಿಗೆ ಸಿ.ಟಿ. ರವಿ ಎನ್‌ಕೌಂಟರ್‌ ಮಾಡುವ ಉದ್ದೇಶವಿತ್ತೇ?: ಕೇಂದ್ರ ಸಚಿವ ಜೋಶಿ

| Published : Dec 23 2024, 01:02 AM IST

ಸಾರಾಂಶ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಜೇಬಿನಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದರೆ ಅವರ ಉದ್ದೇಶವೇನು?.

ಹುಬ್ಬಳ್ಳಿ:

ವಿಪ ಸದಸ್ಯ ಸಿ.ಟಿ. ರವಿ ಮೇಲೆ ತರಾತುರಿಯಲ್ಲಿ ಎಫ್‌ಐಆರ್‌ ದಾಖಲಿಸಿ ರಾತ್ರಿಯಿಡಿ ಕಬ್ಬಿನಗದ್ದೆ, ಕಂಕರ್‌ ಮಿಷನ್‌, ಅರಣ್ಯಕ್ಕೆ ಕರೆದುಕೊಂಡು ಹೋಗಿದ್ದಾದರೂ ಯಾಕೆ? ಅವರನ್ನು ಎನ್‌ಕೌಂಟರ್‌ ಮಾಡುವ ಉದ್ದೇಶವಿತ್ತಾ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಪೊಲೀಸರ ಉದ್ದೇಶವಾಗಿದ್ದರೂ ಏನಿತ್ತು? ಅಲ್ಲಿನ ಪೊಲೀಸ್‌ ಆಯುಕ್ತರಿಗೆ ಸಾಮಾನ್ಯಜ್ಞಾನವಿಲ್ಲವೆ? ಅವರು ಆಯುಕ್ತರಾಗಿ ಮುಂದುವರಿಯಲು ಅಸಮರ್ಥರಾಗಿದ್ದಾರೆ. ರವಿ ಅವರನ್ನು ಎಲ್ಲಿ ಕರೆದುಕೊಂಡು ಹೋದರೂ ಮಾಧ್ಯಮದವರು ಬೆನ್ನು ಬಿದ್ದಿದ್ದಕ್ಕೆ ರವಿ ಅವರಿಗೆ ಏನು ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಖಾನಾಪುರದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಜತೆಗೆ ಆಯುಕ್ತರು ಏಕೆ ಮಾತಾಡಿಲ್ಲ? ಸಾಂವಿಧಾನಿಕ ಹುದ್ದೆಯಲ್ಲಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಅವರನ್ನು ಖಾನಾಪುರ ಠಾಣೆಗೆ ಬಿಟ್ಟಿಲ್ಲ. ಇದು ರಾಜಕೀಯ ದ್ವೇಷ. ಛಲವಾದಿ ನಾರಾಯಣಸ್ವಾಮಿ ಹರಿಜನ ಅಂತ ಅವರ ಜತೆಗೆ ಪೊಲೀಸ್ ಆಯುಕ್ತರು ಹಾಗೆ ನಡೆದುಕೊಂಡಿದ್ದಾರೆಯೇ? ನಾವು ಯಾವತ್ತೂ ಅಸ್ಪೃಶ್ಯತೆ ಬೆಂಬಲಿಸಿಲ್ಲ. ಆದರೆ, ಬೆಳಗಾವಿ ಪೊಲೀಸರು ಛಲವಾದಿ ನಾರಾಯಣಸ್ವಾಮಿ ಆ ಜನಾಂಗದವರು ಅಂತ ಆ ರೀತಿಯಲ್ಲಿ ನಡೆದುಕೊಂಡಿರಬಹುದು. ಈ ಕುರಿತು ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.

ಉದ್ದೇಶವಾದರೂ ಏನು?:

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಜೇಬಿನಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದರೆ ಅವರ ಉದ್ದೇಶವೇನು? ನೀವು ಬಳ್ಳಾರಿಗೆ ಹೋಗಿ ತೊಡೆ ತಟ್ಟಿದಾಗ ನಮ್ಮ ಸರ್ಕಾರ ಅಧಿಕಾರದಲ್ಲಿತ್ತು. ಆಗ ಪೊಲೀಸರು ನಿಮಗೆ ರಕ್ಷಣೆ ನೀಡಿದ್ದರಲ್ಲವೇ? ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದರು.

ಯಾವ ನಾಯಿ ಕಡಿದಿತ್ತು?:

ಹಿಂದೆ ಕಾಂಗ್ರೆಸ್‌ನವರು ಡಾ. ಬಿ.ಆರ್‌. ಅಂಬೇಡ್ಕರ್ ಅವರನ್ನು ಸೋಲಿಸಿದಾಗ ನಿಮಗೆ ಯಾವ ನಾಯಿ ಕಡಿದಿತ್ತು? ಈಗ ಅಮಿತ್ ಶಾ ಹೇಳಿಕೆ ಕುರಿತು ಕಾಂಗ್ರೆಸ್‌ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಹಿಂದೆ ನಡೆದ ಘಟನೆಯ ವೇಳೆ ನಿಮ್ಮ ನಾಯಕರಿಗೆ ಯಾವ ನಾಯಿ ಕಡಿದಿತ್ತು ಎಂಬುದನ್ನು ತಿಳಿಸಲಿ ಎಂದರು.

ದ್ವೇಷ ಸಾಧಿಸಿದ್ದಾರೆ:

ಸಿ.ಟಿ. ರವಿ ಪ್ರಕರಣ ಗೃಹ ಸಚಿವರ ಗಮನಕ್ಕೆ ಬಂದಿಲ್ಲ ಎನ್ನುವುದಾದರೆ ಅವರು ಆ ಹುದ್ದೆಯಲ್ಲಿ ಇರಬೇಕೋ ಬೇಡವೋ ಎನ್ನುವುದನ್ನು ಅವರು ವಿಚಾರ ಮಾಡಬೇಕು. ಏನೇ ಆದರೂ ಗೃಹ ಸಚಿವರ ಗಮನಕ್ಕೆ ಬರುತ್ತದೆ. ಗೊತ್ತಿಲ್ಲ ಅಂದರೆ ಏನು ಅರ್ಥ? ಪರಮೇಶ್ವರ ಒಬ್ಬ ಜಂಟಲ್​ಮ್ಯಾನ್. ಅವರು ವಿಚಾರ ಮಾಡಬೇಕು. ಸಿ.ಟಿ. ರವಿ ವಿಚಾರದಲ್ಲಿ ದ್ವೇಷ ಸಾಧಿಸಿದ್ದಾರೆ. ಅದಕ್ಕೆ ಬೆಳಗಾವಿ ಪೊಲೀಸರು ಸಾಥ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.