ಸಾರಾಂಶ
ಬೆಣ್ಣೆ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮವಾಗಿ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗಲು ಪರ್ಯಾಯವಾಗಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು
ಶಿರಸಿ: ಧಾರಾಕಾರವಾಗಿ ಸುರಿದ ಮಳೆಯಿಂದ ಕುಮಟಾ-ಶಿರಸಿ ರಸ್ತೆಯ ಬೆಣ್ಣೆಹೊಳೆಯ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿರುವುದರಿಂದ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಶುಕ್ರವಾರ ಸಂಜೆ ಸುಮಾರಿಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಬಂಡಲ ಗ್ರಾಪಂ ವ್ಯಾಪ್ತಿಯ ಬೆಣ್ಣೆ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮವಾಗಿ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗಲು ಪರ್ಯಾಯವಾಗಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ನೀರಿನ ರಭಸಕ್ಕೆ ಪೈಪ್ ಸಮೇತ ಕೊಚ್ಚಿ ಹೋಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಅಧಿಕಾರಿಗಳ ಜತೆ ತೆರಳಿ ವೀಕ್ಷಿಸಿ, ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಕಂಪನಿಯ ಅಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದರು.ಮಾಧ್ಯಮದವರ ಜತೆ ಮಾತನಾಡಿದ ಅವರು, ಶಿರಸಿ-ಕುಮಟಾ ಮಾರ್ಗದಲ್ಲಿ ರಸ್ತೆ ಸಂಚಾರ ಆದೇಶವನ್ನು ಜಿಲ್ಲಾಧಿಕಾರಿ ಮುಂದುವರೆಸಿದ್ದು, ಹೊಳೆಯಲ್ಲಿ ನೀರು ಉಕ್ಕಿ ಹರಿದು ಪರ್ಯಾಯ ಸೇತುವೆ ಕೊಚ್ಚಿಹೋಗಿದೆ. ಬೆಣ್ಣೆಹೊಳೆ ಸೇತುವೆ ಶೇ.೯೦ರಷ್ಟು ಪೂರ್ಣಗೊಂಡಿದ್ದು, ಒಂದು ವಾರದೊಳಗಡೆ ಕಾಮಗಾರಿ ಪೂರ್ಣಗೊಳಿಸಿ, ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ. ಬುಗಡಿ, ದೇವಿಮನೆ, ರಾಗಿಹೊಸಳ್ಳಿ ಮತ್ತು ಹೆಬ್ರೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಅವರಿಗೆ ಸಹಾಯಕ ಮಾಡುವ ನಿಟ್ಟಿನಲ್ಲಿ ತಾಲೂಕಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಡಿವೈಎಸ್‌ಪಿ ಗೀತಾ ಪಾಟೀಲ, ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಹಾಗೂ ಎನ್‌ಎಚ್‌ಎಐ ಮತ್ತ ಆರ್‌ಎನ್‌ಎಸ್ ಕಂಪೆನಿಯ ಅಧಿಕಾರಿಗಳು ಇದ್ದರು.