ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಹಾಗೂ ಸ್ವಚ್ಛತೆ ವಿಷಯವಾಗಿ ಬದ್ಧತೆ ತೋರಬೇಕಾಗಿರುವುದು ಇಂದಿನ ಅನಿವಾರ್ಯವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನವ ದೆಹಲಿಯ ಲಾಡಲಿ ಫೌಂಡೇಷನ್ ಸಾರಥ್ಯದಲ್ಲಿ ಸ್ವಚ್ಛತೆ, ನೈರ್ಮಲ್ಯ ಜಾಗೃತಿಗಾಗಿ ವಿಶೇಷ ಮ್ಯಾರಾಥಾನ್, ನಡಿಗೆ ಕಾರ್ಯಕ್ರಮದ ವಾಶೀಥಾನ್ ಹೆಸರಿನ ಓಟಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಮನೆ, ಸುತ್ತಮುತ್ತಲಿನ ಪರಿಸರ ಹೀಗೆ ಎಲ್ಲವೂ ಸ್ವಚ್ಛತೆಯಿಂದ ಇರಬೇಕು. ಸ್ವಚ್ಛತೆ ನಮ್ಮ ಬದ್ಧತೆ ಮತ್ತು ನಮ್ಮ ಆದ್ಯತೆಯಾಗಬೇಕು ಎಂದರು.ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸಂಚಾರ ಹೆಚ್ಚಿರುತ್ತದೆ. ಹೀಗಾಗಿ ಅವುಗಳು ಸ್ವಚ್ಚವಾಗಿಡಬೇಕಿರುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಸಹ ಸ್ವಚ್ಛತೆ, ಶೌಚಾಲಯ ನಿರ್ಮಾಣ ಹೀಗೆ ಅನೇಕ ರೀತಿಯ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ ಎಂದು ತಿಳಿಸಿದರು.ನವದೆಹಲಿಯ ಲಾಡಲಿ ಪೌಂಡೇಷನ್ ಅತ್ಯಾಧುನಿಕ ಎ.ಐ.ತಂತ್ರಜ್ಞಾನದ ಶೌಚಾಲಯಗಳನ್ನು ಜಿಲ್ಲೆಯ ವಿವಿಧ ಶಾಲೆ, ಸಾಮುದಾಯಿಕ ಕೇಂದ್ರಗಳಲ್ಲಿ ನಿರ್ಮಿಸಿರುವುದು ಅತ್ಯಂತ ಸೇವಾ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಸ್ವಚ್ಛತೆ ಜಾಗೃತಿಗಾಗಿ ವಿವಿಧ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಲಾಡಲಿ ಫೌಂಡೇಷನ್ ಮುಂದಾಗಿರುವುದು ಹೆಮ್ಮೆಯ ವಿಷಯ. ಈ ಎಲ್ಲ ಕಾರ್ಯಗಳಿಗೆ ಜಿಲ್ಲಾಡಳಿತ ಸದಾ ಸಹಕಾರ ನೀಡಲಿದೆ. ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಜಾಗೃತಿ, ಅತ್ಯಾಧುನಿಕ ಶೌಚಾಲಯ ನಿರ್ಮಾಣ ಮಾಡಿರುವುದು ಉತ್ತಮ ಎಂದರು.ಲಾಡಲಿ ಫೌಂಡೇಷನ್ ರಾಷ್ಟ್ರೀಯ ಸಲಹೆಗಾರ ಡಾ.ಜಾವೀದ ಜಮಾದಾರ ಮಾತನಾಡಿ, ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಿರುವ ಲಾಡಲಿ ಫೌಂಡೇಷನ್ ಜಿಲ್ಲೆಯನ್ನು ದತ್ತು ಪಡೆದು ತನ್ನ ಸೇವಾ ಕಾರ್ಯಕ್ಕೆ ಮುಂದಾಗಿದೆ. ₹ ೩ ಕೋಟಿಗೂ ಅಧಿಕ ವೆಚ್ಚದ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ವಿವರಿಸಿದರು. ಲಾಡಲಿ ಫೌಂಡೇಷನ್ ಸಿಇಒ ದೇವೆಂದ್ರ ಗುಪ್ತಾ ಮಾತನಾಡಿ, ಈ ಫೌಂಡೇಶನ್ ಲಾಭರಹಿತ ಸಾಮಾಜಿಕ ಸೇವಾ ಸಂಸ್ಥೆ. ಜಮ್ಮುಕಾಶ್ಮೀರ, ಗುಜರಾತ್, ಕರ್ನಾಟಕ ಹೀಗೆ ವಿವಿಧ ರಾಜ್ಯಗಳಲ್ಲಿ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಕಾರ್ಯಕ್ರಮ ಸಂಘಟನೆ, ಅತ್ಯಾಧುನಿಕ ಎಐ ಆಧಾರಿತ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದೆ. ಶ್ರೀರಾಮಜನ್ಮಭೂಮಿ ಅಯೋಧ್ಯೆಯ ಸಂಪೂರ್ಣ ನೈರ್ಮಲೀಕರಣದ ಸಂಕಲ್ಪ ಮಾಡಿ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.