ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸ್ವಚ್ಛತೆಯ ಕೆಲಸ ನಮ್ಮ ದಿನ ನಿತ್ಯದ ಆಗುಹೋಗುಗಳಲ್ಲಿ ಒಂದಾಗಬೇಕೆ ಹೊರತು ಯಾರನ್ನು ಮೆಚ್ಚಿಸುವ ಅಥವಾ ಪ್ರಚಾರಕ್ಕಾಗಿ ಮಾಡುವ ಕೆಲಸವಾಗಬಾರದು ಎಂದು ಮಹಾತ್ಮಗಾಂಧಿ ಮೆಮೋರಿಯಲ್ ಟ್ರಸ್ಟ್ನ ಮ್ಯಾನಜಿಂಗ್ ಟ್ರಸ್ಟಿ ಜಿ.ಮುಕುಲ್ ಮಹಿಂದ್ರ ಕಿವಿಮಾತು ಹೇಳಿದ್ದಾರೆ. ಮಹಾತ್ಮಗಾಂಧಿ ಜನ್ಮ ಜಯಂತಿ ದಿನವಾದ ಗುರುವಾರದಂದು ಮಹಾತ್ಮಗಾಂಧಿ ಮೆಮೋರಿಯಲ್ ಟ್ರಸ್ಟ್ ನೇತೃತ್ವದಲ್ಲಿ ಸುಂಟಿಕೊಪ್ಪ ಗ್ರೇಡ್ 1 ಗ್ರಾಮಪಂಚಾಯಿತಿ, ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು, ಜೆಸಿಐ ಸುಂಟಿಕೊಪ್ಪ, ನಮ್ಮ ಸುಂಟಿಕೊಪ್ಪ ಸಹಯೋಗದಲ್ಲಿ ಹಮ್ಮಿಕೊಂಡ ಸುಂಟಿಕೊಪ್ಪ ಸರ್ಕಾರಿ ಆರೋಗ್ಯ ಕೇಂದ್ರದ ಮುಂಭಾಗದಿಂದ ಗರಗಂದೂರು ಡಿ.ಚೆನ್ನಮ್ಮ ಕಾಲೇಜು ವರೆಗೆ ನಡೆದ ಸ್ವಚ್ಛಾತ ಅಭಿಯಾನದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸ್ವಚ್ಛತೆ ಹಸಿರಿಗೆ ಹೆಸರಾಗಿದ್ದ ಬೆಂಗಳೂರು ನಗರ ಇಂದು ಕಸದ ಕೊಂಪೆಯಾಗುತ್ತಿದೆ. ಬೆಳೆಯುತ್ತಿರುವ ಪಟ್ಟಣ ಪ್ರದೇಶಗಳು ಜನಸಂಖ್ಯೆಯ ಹಿನ್ನಲೆಯಲ್ಲಿ ನಮ್ಮ ಊರು ಸೇರಿದಂತೆ ಎಲ್ಲಾಡೆಯೂ ಕಸವಿಲೇವಾರಿ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ನಮ್ಮ ನಮ್ಮ ಊರುಗಳಲ್ಲಿ ಈ ಸಮಸ್ಯೆ ದಿನ ನಿತ್ಯದ ಸಮಸ್ಯೆಯಾಗುವ ಮೊದಲು ಕಾರ್ಯಾಚರಣೆ ಮಾಡಬೇಕೆಂದು ಅವರು ಕರೆ ನೀಡಿದರು.ಟ್ರಸ್ಟಿಗಳಲ್ಲಿ ಒಬ್ಬರಾದ ಝಯಿದ್ ಆಹ್ಮದ್ ಮಾತನಾಡಿ, ಸ್ವಚ್ಛತೆ ಮತ್ತು ಹಸಿರು ಕಾಪಾಡುವ ಹಿನ್ನೆಲೆಯಲ್ಲಿ ನಾವು ಹತ್ತು ವರ್ಷಗಳ ಹಿಂದೆ ನೆರಳಿನ ಗಿಡಗಳನ್ನು ನೆಟ್ಟಿದ್ದು ಇಂದು ಅವುಗಳು ಮರಗಳಾಗಿ ಬೆಳೆದಿವೆ. ಗುಂಡುಗುಟ್ಟಿ ಮಂಜನಾಥಯ್ಯ ಅವರು ಮಹಾತ್ಮಾ ಗಾಂಧಿಯವರನ್ನು ಕೊಡಗಿಗೆ ಕರೆತಂದ ನೆನಪಿನ ಹಿನ್ನೆಲೆಯಲ್ಲಿ ಅವರು ಸಾಗಿದ ದಾರಿಯನ್ನು ಅವರ ಜನ್ಮಜಯಂತಿಯ ದಿನದಂದು ನೆನಪಿಸಿಕೊಂಡು ಗೌರವ ಆರ್ಪಿಸುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸ್ವಚ್ಛತಾ ಕಾರ್ಯಕ್ರಮವನ್ನು ಉದ್ದೇಶಿಸಿ ಟ್ರಸ್ಟಿ ಎಂ.ಇ.ಮೊಹಿದ್ದೀನ್, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಪ್ರಸಾದ್ ಕುಟ್ಟಪ್ಪ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ನಿವೃತ್ತ ಲೇಪ್ಟ್ನೆಂಟ್ ಕರ್ನಲ್ ಹಾಗೂ ಡಿ.ಚೆನ್ನಮ್ಮ ಕಾಲೇಜು ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಬಿಜಿವಿ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಶಬ್ಭಿರ್, ಆಲಿಕುಟ್ಟಿ, ಮಹಾತ್ಮಗಾಂಧಿ ಮೆಮೊರಿಯಲ್ ಟ್ರಸ್ಟ್ನ ಟ್ರಸ್ಟಿಗಳಾದ ಡೆನ್ನಿಸ್ ಡಿಸೋಜ, ರಮೇಶ್ ಪಿಳ್ಳೆ, ಕಾಲೇಜಿನ ಉಪನ್ಯಾಸಕರು ಸೇರಿದಂತೆ ಮತ್ತಿತರರು ಇದ್ದರು.