ಪೊಲೀಸರ ಸರ್ಪಗಾವಲಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ

| Published : Apr 18 2025, 12:46 AM IST

ಪೊಲೀಸರ ಸರ್ಪಗಾವಲಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹರೀಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾಡಳಿತ ಪೊಲೀಸರ ಸರ್ಪಗಾವಲಿನಲ್ಲಿ ಗುರುವಾರ ಚಾಲನೆ ನೀಡಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ಹರೀಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾಡಳಿತ ಪೊಲೀಸರ ಸರ್ಪಗಾವಲಿನಲ್ಲಿ ಗುರುವಾರ ಚಾಲನೆ ನೀಡಿದೆ.

ಹರೀಸಂದ್ರ ಸರ್ವೆ ನಂಬರ್ 166ರ ಸರ್ಕಾರಿ ಜಮೀನಿನಲ್ಲಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ರಾಮನಗರ ನಗರಸಭೆಗೆ 9.38 ಎಕರೆ ಹಾಗೂ ಬಿಡದಿ ಪುರಸಭೆ 9 ಎಕರೆ ಮಂಜೂರಾಗಿದ್ದು, ಇಲ್ಲಿ ಘಟಕಗಳು ನಿರ್ಮಾಣಗೊಳ್ಳಲಿವೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪೋಲೀಸರ ಸರ್ಪಗಾವಲಿನಲ್ಲಿ ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ಭೂಮಿ ನೆಲಸಮ ಮಾಡುವ ಕೆಲಸ ಆರಂಭಿಸಿದರು. ಇಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಕಳೆದ ಮಾರ್ಚ್ 5ರಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಮತ್ತು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಗೆ ತೆರಳಿದ್ದ ಸಮಯದಲ್ಲಿ ಹರೀಸಂದ್ರ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

ಅಲ್ಲದೆ ರೈತರು ಭೂಮಿ ಒಡೆತನಕ್ಕಾಗಿ ಅರ್ಜಿ ಹಾಕಲಾಗಿದ್ದು ಮಾವು ಸಹ ಬೆಳೆಯಲಾಗಿದೆ. ಘಟಕ ನಿರ್ಮಾಣದಿಂದ ನದಿ ಕಲುಷಿತಗೊಳ್ಳುತ್ತದೆ. ನೈಸರ್ಗಿಕ ಪ್ರದೇಶವೂ ಹಾಳಾಗುತ್ತದೆ. ಅಲ್ಲದೆ, ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ಘಟಕದಿಂದ ಹೊರ ಬರುವ ವಾಸನೆಯಿಂದ ಉಸಿರಾಡಲು ಸಾಧ್ಯವಾಗದೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.

ಆಗ ಶಾಸಕ ಇಕ್ಬಾಲ್ ಹರೀಸಂದ್ರದ ಜಮೀನುಗಳಲ್ಲಿ ಕಸ ಹಾಕುವುದಿಲ್ಲ. ವೈಜ್ಞಾನಿಕ ರೀತಿಯಲ್ಲಿಯೇ ಬೃಹತ್ ಯಂತ್ರಗಳ ಮೂಲಕ ವಿಲೇವಾರಿ ಮಾಡಿ ಅಲ್ಲೇ ಗೊಬ್ಬರ ಮಾಡಿ ಚೀಲಕ್ಕೆ ತುಂಬಿ ಮಾರಾಟ ಮಾಡಬಹುದಾದ ಘಟಕ ಇದಾಗಿದೆ ಎಂದು ಜನರ ಮನವೊಲಿಸುವ ಪ್ರಯತ್ನ ವಿಫಲವಾಗಿತ್ತು. ಜನರ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಪೂಜೆ ನಿಲ್ಲಿಸಿ ಸ್ಥಳದಿಂದ ವಾಪಸ್ ತೆರಳಿದ್ದರು.

ಅಲ್ಲದೆ ಬೆಂಗಳೂರಿನ ಅಪಾರ್ಟ್ಮೆಂಟ್ ಸೇರಿದಂತೆ ಇನ್ನಿತರ ಕಡೆ ನಡೆಯುತ್ತಿರುವ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳಿಗೆ ಗ್ರಾಪಂ ವ್ಯಾಪ್ತಿಯ ಸದಸ್ಯರು, ಮುಖಂಡರನ್ನು ಕರೆದುಕೊಂಡು ಹೋಗಿ ಅಲ್ಲಿನ ಘಟಕಗಳ ಕಾರ್ಯಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಸಹ ಮಾಡಿದ್ದರು. ಇದನ್ನು ಒಪ್ಪದ ಗ್ರಾಮಸ್ಥರು ವಿರೋಧ ಮುಂದುವರಿಸಿದ್ದರು.

ಇದೀಗ ಏಕಾಏಕಿ ಘಟಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಧಿಕಾರಿಗಳು ಜೆಸಿಬಿಗಳ ಮೂಲಕ ಜಮೀನು ಸಮತಟ್ಟು ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ನಗರಸಭೆ ಆಯುಕ್ತ ಡಾ.ಜಯಣ್ಣ ಹಾಗೂ ಬಿಡದಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ಸ್ಥಳದಲ್ಲಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮನಗರ ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕರಾದ ರಮೇಶ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತಿನಲ್ಲಿ ತೊಡಗಿದ್ದರು.

ಶಾಸಕರ ಪಟ್ಟು-ರಾಜಕೀಯ ಚರ್ಚೆಗೆ ಗ್ರಾಸ

ಹರೀಸಂದ್ರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಪಟ್ಟು ಹಿಡಿದಿರುವುದು ರಾಜಕೀಯ ಚರ್ಚೆಗೂ ಗ್ರಾಸವಾಗಿದೆ. ರಾಮನಗರ ನಗರಸಭೆಗೆ 9.38 ಎಕರೆ ಹಾಗೂ ಮಾಗಡಿ ಕ್ಷೇತ್ರದ ಬಿಡದಿ ಪುರಸಭೆಗೂ 9 ಎಕರೆ ಜಮೀನನ್ನು ಹರೀಸಂದ್ರದಲ್ಲಿ ಗುರುತಿಸಿ ಕೊಟ್ಟಿರುವುದನ್ನು ಶಾಸಕರು ಏಕೆ ಪ್ರಶ್ನಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ರೈತರು ಹಾಗೂ ಕೃಷಿ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಇಲ್ಲಿ ಘಟಕ ನಿರ್ಮಾಣ ಮಾಡುವುದು ಬೇಡ ಎಂದು ನೀಡಿದ ಸಲಹೆಯನ್ನು ಶಾಸಕರು ನಿರಾಕರಿಸಿದ್ದಾರೆ. ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಘಟಕ ನಿರ್ಮಾಣ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯ ವಿಷಯವಾಗುವುದರಲ್ಲಿ ಅನುಮಾನ ಇಲ್ಲವಿಲ್ಲ ಎಂದೂ ಕೇಳಿ ಬರುತ್ತಿದೆ.