ಸಾರಾಂಶ
ಹಾನಗಲ್ಲ: ನಗರದಲ್ಲಿ ಹಲವು ರಸ್ತೆ, ಚರಂಡಿ ರಿಪೇರಿ, ಅಭಿವೃದ್ಧಿ ಕಾರ್ಯಗಳಿದ್ದರೂ ಗಮನಿಸದೇ ಅನಗತ್ಯಕ್ಕೆ ಹೆಚ್ಚು ಖರ್ಚು ಮಾಡುವ ಮೂಲಕ ಪುರಸಭೆ ಹಣವನ್ನು ಪೋಲು ಮಾಡುತ್ತಿದೆ ಎಂದು ಪುರಸಭೆ ಸದಸ್ಯೆ ಶೋಭಾ ಉಗ್ರಣ್ಣನವರ ಕಿಡಿಕಾರಿದರು.ಸೋಮವಾರ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಮೇಲೆ ಹರಿಹಾಯ್ದ ಅವರು, ಕಲ್ಲಹಕ್ಕಲ ಹಾಗೂ ಕಮಾಟಗೇರಿ ಬಡಾವಣೆಯ ರಸ್ತೆ ಹಾಳಾಗಿ ಗಟಾರದಲ್ಲಿನ ನೀರು ಹರಿಯದೇ ಇಡೀ ಬಡಾವಣೆ ಸಾರ್ವಜನಿಕರು ಪುರಸಭೆಗೆ ಶಾಪ ಹಾಕುತ್ತಿದ್ದಾರೆ.
7 ವರ್ಷಗಳಿಂದ ಈ ಬಗ್ಗೆ ಕೇಳುತ್ತಿದ್ದೇನೆ. ಎರಡು ಮೂರು ವರ್ಷಗಳಿಂದ ದುಂಬಾಲು ಬಿದ್ದರೂ ಈ ಬಗ್ಗೆ ಗಮನ ಸೆಳೆದರೂ ಈ ಕಾಮಗಾರಿಗೆ ಪುರಸಭೆ ನಿರ್ಲಕ್ಷ್ಯ ತೋರಿದೆ. ಇದರ ಬದಲು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸೇರಿದಂತೆ ಹಲವೆಡೆ ಅನಗತ್ಯವಾಗಿ ಅಲಂಕಾರಕ್ಕಾಗಿ ₹83692 ಖರ್ಚು ಹಾಕಿರುವಿರಿ. ಇದಕ್ಕಾಗಿ ಇಷ್ಟು ಖರ್ಚಾಗಿದೆಯೇ, ಇದರ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು.ಇದು ಸಾರ್ವಜನಿಕರ ತೆರಿಗೆ ಹಣ. ಸಾರ್ವಜನಿಕರೇ ಇದನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು. ಒಂದು ವರ್ಷದ ಹಿಂದೆ ಕೊರೆದ ಕೊಳವೆ ಬಾವಿಯನ್ನು ಇನ್ನೂ ಬಳಕೆಗೆ ಮುಂದಾಗುತ್ತಿಲ್ಲ ಎಂದರು. ಇದಕ್ಕೆ ಪುರಸಭೆ ಸದಸ್ಯ ನಾಗಪ್ಪ ಸವದತ್ತಿ ಧ್ವನಿಗೂಡಿಸಿದರು.ಪುರಸಭೆ ಸದಸ್ಯ ಜಮೀರ ಶೇಖ್ ಮಾತನಾಡಿ, ಮಳೆಯಿಂದಾಗಿ ರಸ್ತೆ ಹಾಳಾಗಿವೆ. ಇಷ್ಟರಲ್ಲೇ ದುರಸ್ತಿ ಮಾಡಿಸುತ್ತೇವೆ ಎಂದು ಹೇಳಿದರೆ ಸಾಲದು. ಕೂಡಲೇ ಅಗತ್ಯ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಿ ಅಲ್ಲಿನ ಜನರಿಂದ ಪುರಸಭೆಗೆ ಟೀಕೆ ಬರುವುದನ್ನು ತಪ್ಪಿಸಿರಿ. ಇದರೊಂದಿಗೆ ಜಾಹಿರಾತಿಗಾಗಿ ₹295570 ಖರ್ಚನ್ನು ಬರೆದಿದ್ದೀರಿ. ಯಾವುದಕ್ಕೆ ಜಾಹಿರಾತು ನೀಡಿದಿರಿ ಎಂದು ಪ್ರಶ್ನಿಸಿದ ಅವರು, ಪಟ್ಟಣದಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿ ಕನಸಿನ ಮಾತಾಗಿದೆ.
ಇದಕ್ಕಾಗಿ ಹಣ ಖರ್ಚು ಹಾಕುತ್ತೀರಿ. ಆದರೆ ಅಲ್ಲಿ ಕೆಲಸವೇ ಆಗಿಲ್ಲ. ಹಾನಗಲ್ಲಿನಂತಹ ಪಟ್ಟಣದಲ್ಲಿ ಒಂದೂ ಪಾರ್ಕ್ ಸರಿಯಾಗಿ ಆಭಿವೃದ್ಧಿಯಾಗಿಲ್ಲ. ಎಲ್ಲ ಸಭೆಗಳಲ್ಲಿ ಕೇವಲ ಪ್ರಶ್ನೆ ಕೇಳುವುದೇ ಆಗುತ್ತದೆ. ಯಾವುದಕ್ಕೂ ಉತ್ತರವೂ ಸಿಗುವುದಿಲ್ಲ. ಅಭಿವೃದ್ಧಿಯಂತೂ ಕಾಣಲು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು.ಪುರಸಭೆಯ ಸ್ವಂತದ ಜೆಸಿಬಿ ಇದ್ದರೂ ಬಾಡಿಗೆ ಜೆಸಿಬಿ ಬಳಸಿ ಖರ್ಚು ಹಾಕಿದ್ದೀರಿ. ಇದು ಹಣದ ಅಪವ್ಯಯವಲ್ಲವೆ ಎಂದು ಸದಸ್ಯ ನಾಗಪ್ಪ ಸವದತ್ತಿ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಪುರಸಭೆ ಜೆಸಿಬಿ ರಿಪೇರಿ ಇದೆ. ಹೀಗಾಗಿ ಬಳಸಿದೆವು ಎಂದು ತಿಳಿಸಿದಾಗ, ದುರಸ್ತಿ ಮಾಡಿಸುವ ಬದಲು ಬಾಡಿಗೆ ಜೆಸಿಬಿ ಪಡೆದರೆ ಪುರಸಭೆಗೆ ಭಾರೀ ನಷ್ಟ ಎಂದರು. ಈ ಕೂಡಲೇ ಜೆಸಿಬಿ ದುರಸ್ತಿ ಮಾಡಿಸಿ ಬಳಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷರೂ ಆದ ಸದಸ್ಯೆ ಹಸೀನಾಬಾನು ನಾಯ್ಕನವರ, ನಗರದಲ್ಲಿನ ಗುಂಡಿ ಮುಚ್ಚಲೂ ಪುರಸಭೆಯಲ್ಲಿ ಹಣವಿಲ್ಲವೆ? ಸಾರ್ವಜನಿಕರಿಗೆ ಇದರಿಂದಾಗುವ ತೊಂದರೆ ಬಗ್ಗೆ ಒಂದಷ್ಟೂ ಕಾಳಜಿ ಪುರಸಭೆಗೆ ಇಲ್ಲದಾಗಿದೆ. ನಿತ್ಯ ಸಮಸ್ಯೆಗಳಿಗೂ ಸ್ಪಂದಿಸದ ಪುರಸಭೆ ಇದೆಯೋ ಇಲ್ಲವೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದು ಗಮನ ಸೆಳೆದರು. ಸದಸ್ಯರಾದ ಮಮತಾ ಆರೆಗೊಪ್ಪ ಹಾಗೂ ವಿರುಪಾಕ್ಷಪ್ಪ ಕಡಬಗೇರಿ ಇದಕ್ಕೆ ಧ್ವನಿಗೂಡಿಸಿದರು.ಹಳೇಕೋಟೆ ಗ್ರಾಮದ ಕಂಬಳಗೇರಿಗೆ ಹೊಂದಿಕೊಂಡು 6 ಎಕರೆ 36 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆಯಾಗಿರುವ ಜಮೀನಿನ ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡಕೂಡದು ಎಂದು ಪುರಸಭೆ ಸದಸ್ಯ ಪರಶುರಾಮ ಖಂಡೂನವರ ಒತ್ತಾಯಿಸಿದರು. ಇದರಿಂದ ಅಚಗೆರೆ ಕೆರೆ ಕೆಳಗಿನ ನೂರಾರು ಎಕರೆ ಜಮೀನು ಸಮಸ್ಯೆಗೆ ಒಳಗಾಗುತ್ತದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ತಾಂತ್ರಿಕ ಅನುಮೋದನೆ ನೀಡಕೂಡದು ಎಂದು ಒತ್ತಾಯಿಸಿದರು.ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ವೇದಿಕೆಯಲ್ಲಿದ್ದರು.