ಸಾರಾಂಶ
ಕನ್ನಡಪ್ರಭ ಸರಣಿ ವರದಿ ಭಾಗ : 148
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳು ಅವೈಜ್ಞಾನಿಕವಾಗಿ, ಚರಂಡಿಗಳ ಮೂಲಕ ಹಳ್ಳಕೊಳ್ಳಗಳಿಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ, ಪರಿಸರ ಅಧಿಕಾರಿಗಳು ಬುಧವಾರ (ಸೆ.3) ಇಲ್ಲಿನ ಫಾರ್ಮಾ ಕಂಪನಿಯೊಂದರಿಂದ ಹೊರಬಿಡಲಾಗುತ್ತಿದ್ದ ದ್ರವತ್ಯಾಜ್ಯ ಮಾದರಿಯನ್ನು ಸಂಗ್ರಹಿಸಿದ್ದಾರೆ.ಇಲ್ಲಿನ ಫಾರ್ಮಲ್ಸ್ ಲ್ಯಾಬ್ ಪ್ರೈ. ಲಿ., ಎನ್ನುವ ಕಂಪನಿ ಹೊರಗಡೆಯ ಚರಂಡಿಯಲ್ಲಿ ಹರಿಯುತ್ತಿದ್ದ ಕಪ್ಪು ದ್ರವತ್ಯಾಜ್ಯದ ಮಾದರಿ ಪರಿಸರ ಇಲಾಖೆಯ ಅಧಿಕಾರಿ ಹನುಮಂತಪ್ಪ ಮತ್ತವರ ತಂಡ ಸಂಗ್ರಹಿಸಿ, ಪ್ರಾದೇಶಿಕ ಕಚೇರಿಯಲ್ಲಿ ಪ್ರಯೋಗಾಲಯಕ್ಕೆ ವರದಿಗೆಂದು ಕಳುಹಿಸಲಿದ್ದಾರೆ ಎಂದು ಹೇಳಲಾಗಿದೆ.
ಮಳೆ ಬಂದಂತಹ ಸಂದರ್ಭಗಳಲ್ಲಿ ಕಾರ್ಖಾನೆಯ ಹೊರಗಿನ ಚರಂಡಿಗಳ ಮೂಲಕ ಹಳ್ಳಕೊಳ್ಳಗಳಿಗೆ ತ್ಯಾಜ್ಯ ಹರಿಬಿಡುತ್ತಿರುವ ಕೆಲವು ಕಂಪನಿಗಳ ಕೃತ್ಯದಿಂದ ಜನ-ಜಲಚರಗಳ ಸಾವು ನೋವುಗಳಿಗೆ ಕಾರಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಅದರಲ್ಲೂ, ಜುಲೈ -ಆಗಸ್ಟ್ ತಿಂಗಳಲ್ಲಿ ಸುರಿದ ಸತತ, ಭಾರಿ ಮಳೆಯ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡ ಕೆಲವು ಕಂಪನಿಗಳು, ವಿಷಕಾರಿ ತ್ಯಾಜ್ಯ ಹರಿಬಿಟ್ಟಿದ್ದರಿಂದ ಸಾವಿರಾರು ಮೀನುಗಳ ಸಾವಿಗೆ ಕಾರಣವಾಗಿತ್ತು.ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳ ವಿಷಗಾಳಿ ಹೊರಸೂಸುವಿಕೆ ಹಾಗೂ ತ್ಯಾಜ್ಯ ದುರ್ನಾತದಿಂದಾಗಿ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳ ಬೀರುತ್ತಿರುವುದರಿಂದ, ಫಾರ್ಮಾ ಕಂಪನಿಗಳ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ. ಅನೇಕ ಬಾರಿ ಇಂತಹ ಪ್ರಕರಣಗಳ ಬಗ್ಗೆ, ಅವೈಜ್ಞಾನಿಕ ವಿಲೇವಾರಿ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ದೂರು ಕೊಟ್ಟರೂ ಸಹ ಕ್ರಮ ಕೈಗೊಳ್ಳದೆ, ಕಂಪನಿಗಳ ವಾರ್ಷಿಕ ಪರವಾನಗಿ ನವೀಕರಿಸುತ್ತಿರುವ ಮಂಡಳಿಯ ಕಾರ್ಯವೈಖರಿಯ ಬಗ್ಗೆಯೂ ಸ್ಥಳೀಯರಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ.
ಕಂಪನಿಗಳ ಕೃತ್ಯವನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟಾಗ, ಅವುಗಳ ವಿರುದ್ಧ ಭಾರಿ ಕ್ರಮ ಕೈಗೊಳ್ಳುವುದಾಗಿ ಹೇಳುವ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಕಂಪನಿಗಳ ಪರ ವಕಾಲತ್ತು ವಹಿಸುವವರಂತೆ ಮಾತನಾಡಿ, ಅವರ ವಿರುದ್ಧ ಕ್ರಮಕ್ಕೆ ಮುಂದಾಗದೆ, ನಾಮ್ ಕೆ ವಾಸ್ತೆಯಂತೆ ಎಚ್ಚರಿಕೆ ನೀಡುತ್ತಿರುವುದು ವಿಚಿತ್ರ ಅಂತಾರೆ ಸೈದಾಪುರದ ಸಾಮಾಜಿಕ ಹೋರಾಟಗಾರ ಭೀಮಣ್ಣ.ಬುಧವಾರ ಸಂಗ್ರಹಿಸಿದ ನೀರಿನ ಮಾದರಿಯ ಪ್ರಯೋಗಾಲಯ ವರದಿ ಸತ್ಯಾಸತ್ಯತೆ ಹೊರಹಾಕಬೇಕಿದೆ. ಈ ಹಿಂದಿನಂತೆ, ಕಲುಷಿತ ನೀರಿನ ಬದಲು, ಶುದ್ಧ ನೀರಿನ ಮತ್ತೊಂದು ಸಂಗ್ರಹ ಕಳುಹಿಸಿ, ವಾಸ್ತವಾಂಶ ವರದಿಯನ್ನು ಅಧಿಕಾರಿಗಳು ಬುಡಮೇಲು ಮಾಡಬಾರದು ಎಂದೆನ್ನುವ ಶೆಟ್ಟಿಹಳ್ಳಿಯ ಕಾಶೀನಾಥ್, "ನಮ್ಮೆದುರು ಸಂಗ್ರಹಿಸಿ ತ್ಯಾಜ್ಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದರೆ ಮಾತ್ರ ಏನೆಂಬುದು ಗೊತ್ತಾಗುತ್ತದೆ. ಆದರೆ, ಅಧಿಕಾರಿಗಳು ಕಂಪನಿಗಳ ಪರವಾಗಿ ವರ್ತಿಸಿ, ಬೇರೊಂದು ಶುದ್ಧ ನೀರಿನ ಮಾದರಿ ಸಂಗ್ರಹಿಸಿ ಕಳುಹಿಸದರೆ ಪ್ರಯೋಗಾಲಯದಲ್ಲಿ ಇದು ಸರಿಯಿದೆ ಎಂದು ಬರುತ್ತದೆ. ಆವಾಗ, ಇಲ್ಲೇನು ಅಂತಹ ಹಾನಿ ಆಗಿಯೇ ಇಲ್ಲ ಎಂದು ವಾದಿಸುವ ಕಂಪನಿಗಳು ಪಾರಾಗುತ್ತವೆ.. " ಎಂದು ದೂರಿದರು.
ಇಂತಹ ಶಂಕೆ ಕುರಿತು ಬುಧವಾರ (ಸೆ.3) "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ವರದಿ ಅನೇಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಯೋಗಾಲಯದ ವರದಿಯಲ್ಲಿ ಬರುತ್ತಿದ್ದುದು ಮೂಲ ಸಂಗ್ರಹವೋ ಅಥವಾ ಕಂಪನಿಗಳ ಅನುಕೂಲವಾಗುವಂತೆ ವರದಿ ಬರಲೆಂದು ಪರ್ಯಾಯವಾಗಿ ಶುದ್ಧ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದರೇನೋ ಎಂಬುದಾಗಿ ಶಂಕೆಗಳು ವ್ಯಕ್ತವಾಗಿದ್ದವು.