ತ್ಯಾಜ್ಯ, ಕೊಳಚೆ ನೀರಿನ ಆಗರವಾದ ಫ್ಲೈಓವರ್ ಕೆಳಭಾಗ

| Published : Jun 23 2024, 02:05 AM IST

ಸಾರಾಂಶ

ಫ್ಲೈಓವರಿನ ಕೆಳಭಾಗದ ಎಲ್ಲೆಂದರಲ್ಲಿ ಬಾಟಲ್‌ಗಳು ಬಿದ್ದುಕೊಂಡಿವೆ. ಲಾರಿ ಇತರ ವಾಹನಗಳ ಅನಧಿಕೃತ ಗ್ಯಾರೇಜ್ ಆಗಿದೆ. ಕೆಲವರಿಗೆ ತ್ಯಾಜ್ಯ ಬಿಸಾಡುವ ತಾಣವಾಗಿದೆ.

ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಫ್ಲೈಓವರ್ ಮೇಲೆ ನಿಂತರೆ ಅದ್ಭುತ ಸೌಂದರ್ಯ. ಕೆಳಗಡೆ ಬಂದರೆ ಕೊಳೆಗೇರಿಯಲ್ಲಿದ್ದ ಅನುಭವ. ಕಾರವಾರ ನಗರಕ್ಕೆ ಹೊಂದಿಕೊಂಡೆ ಹಾದುಹೋದ ಫ್ಲೈಓವರ್ ಕೆಳಭಾಗ ಕೊಳಚೆ ಪ್ರದೇಶವಾಗಿ ಪರಿವರ್ತಿತವಾಗಿ, ಡೆಂಘೀ, ಮಲೇರಿಯಾದಂತೆ ಕಾಯಿಲೆಗಳಿಗೆ ಆಹ್ವಾನ ನೀಡುವಂತಿದೆ.

ನೇರವಾಗಿ ಸಂಚರಿಸುವ ವಾಹನಗಳಿಗಾಗಿ ಚತುಷ್ಪಥ ಟನಲ್‌ನಿಂದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ತನಕ ಸುಮಾರು 1.8 ಕಿಮೀ ಉದ್ದದ ಫ್ಲೈಓವರ್ ನಿರ್ಮಿಸಲಾಗಿದೆ. ಫ್ಲೈಓವರ್ ಕೆಳಭಾಗದ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಈ ಸರ್ವೀಸ್ ರಸ್ತೆಗಳ ನಡುವೆ ಇರುವ ಸ್ಥಳವೇ ತ್ಯಾಜ್ಯದ ಗೂಡಾಗಿದೆ.

ಇದು ಕುಡುಕರ ಅಡ್ಡೆಯಾಗಿದೆ. ಎಲ್ಲೆಂದರಲ್ಲಿ ಬಾಟಲ್‌ಗಳು ಬಿದ್ದುಕೊಂಡಿವೆ. ಲಾರಿ ಇತರ ವಾಹನಗಳ ಅನಧಿಕೃತ ಗ್ಯಾರೇಜ್ ಆಗಿದೆ. ಕೆಲವರಿಗೆ ತ್ಯಾಜ್ಯ ಬಿಸಾಡುವ ತಾಣ. ಇನ್ನು ಮಳೆ ನೀರು ಹರಿದುಹೋಗದೆ ತುಂಬಿ ನಿಂತಿದ್ದು ಕೊಳೆಗೇರಿಯಂತಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಕೊಳಚೆ ನೀರು ನಿಂತಲ್ಲಿ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಘೀ, ಮಲೇರಿಯಾದಂತಹ ರೋಗಗಳು ಹಾವಳಿ ಇಡುತ್ತವೆ. ಡೆಂಘೀ ಈಗಾಗಲೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ನಗರಸಭೆಯಿಂದ ಕೂಗಳತೆ ದೂರದಲ್ಲಿ ಫ್ಲೈಓವರ್ ಇದೆ. ಇನ್ನಾದರೂ ನಗರಸಭೆ ಇದನ್ನು ಸ್ವಚ್ಛಗೊಳಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಸ್ವಚ್ಛತೆಗೆ ಕ್ರಮಕೈಗೊಳ್ಳಲಿ

ಕಾರವಾರದಲ್ಲಿ ನಿರಂತರವಾಗಿ 9 ವರ್ಷಗಳಿಂದ ಸ್ವಚ್ಛತೆ ನಡೆಸುತ್ತಿರುವ ಪಹರೆ ವೇದಿಕೆ ಶನಿವಾರ ಫ್ಲೈಓವರ್ ಕೆಳಗಡೆ ಸ್ವಚ್ಛತಾಕಾರ್ಯ ನಡೆಸಲು ಹೋದಾಗ ಫ್ಲೈಓವರ್ ಕೆಳಭಾಗ ಕೊಳೆಗೇರಿಯಂತಾಗಿ ಮಾರ್ಪಟ್ಟಿರುವುದು ಕಂಡುಬಂತು. ಸ್ವಚ್ಛತಾ ಕಾರ್ಯವನ್ನೂ ನಡೆಸಿದರು. ನಗರದ ಪ್ರವೇಶದಲ್ಲೇ ಇಂತಹ ಕಲುಷಿತ ಪರಿಸರ ಇರಬಾರದು. ನಗರಸಭೆ ಇದನ್ನು ಸ್ವಚ್ಛವಾಗಿಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಹರೆ ಸದಸ್ಯರು ಆಗ್ರಹಿಸಿದ್ದಾರೆ.ಕ್ರಮಕೈಗೊಳ್ಳಲಿ

ಫ್ಲೈಓವರ್ ಕೆಳಗಡೆ ತ್ಯಾಜ್ಯ, ಕಲುಷಿತ ನೀರು ಸಂಗ್ರಹಗೊಂಡು ಸ್ಲಂ ಆಗಿ ಪರಿವರ್ತಿತವಾಗಿದೆ. ಈ ಬಗ್ಗೆ ನಗರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಸ್ಥಳವನ್ನು ಚಿಕ್ಕ ಚಿಕ್ಕ ಆಟದ ಮೈದಾನ ಹಾಗೂ ಜನಪರವಾದ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಾಗಬೇಕು.

ನಾಗರಾಜ ನಾಯಕ, ಅಧ್ಯಕ್ಷರು, ಪಹರೆ ವೇದಿಕೆ.

ಸ್ವಚ್ಛತೆಗೆ ಸೂಚನೆ

ಫ್ಲೈಓವರ್ ಕೆಳಗಡೆ ತುಂಬಿರುವ ತ್ಯಾಜ್ಯ ತೆರವು ಮಾಡಲು, ನೀರು ನಿಲ್ಲದಂತೆ ನೋಡಿಕೊಳ್ಳಲು ಹಾಗೂ ಆ ಸ್ಥಳ ಸ್ವಚ್ಛವಾಗಿಡಲು ಕ್ರಮಕೈಗೊಳ್ಳಲು ನಗರಸಭೆಗೆ ಸೂಚನೆ ನೀಡುತ್ತೇನೆ.

ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ.