ಅಧ್ಯಯನ ಹೆಸರಿನಲ್ಲಿ ಕುದೂರು ಗ್ರಾಪಂನಲ್ಲಿ ದುಂದು ವೆಚ್ಚ

| Published : Aug 17 2025, 01:32 AM IST

ಅಧ್ಯಯನ ಹೆಸರಿನಲ್ಲಿ ಕುದೂರು ಗ್ರಾಪಂನಲ್ಲಿ ದುಂದು ವೆಚ್ಚ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಅಪರಾಧ ಪ್ರಕರಣ ತಡೆಯಲು ಮತ್ತು ಎಲ್ಲೆಂದರಲ್ಲಿ ಕಸ ಎಸೆದು ಗ್ರಾಮದ ಅಂದ ಕೆಡಿಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಪಡಿಸಲು ಹಣ ಇಲ್ಲ. ಆದರೆ, ಅಧ್ಯಯನದ ಹೆಸರಿನಲ್ಲಿ ಸಾವಿರಾರು ರುಪಾಯಿ ದುಂದು ವೆಚ್ಚ ಮಾಡಲು ಕುದೂರು ಗ್ರಾಪಂ ಸದಸ್ಯರು ಮುಂದಾಗಿದ್ದಾರೆ.

ಕುದೂರು: ಅಪರಾಧ ಪ್ರಕರಣ ತಡೆಯಲು ಮತ್ತು ಎಲ್ಲೆಂದರಲ್ಲಿ ಕಸ ಎಸೆದು ಗ್ರಾಮದ ಅಂದ ಕೆಡಿಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಪಡಿಸಲು ಹಣ ಇಲ್ಲ. ಆದರೆ, ಅಧ್ಯಯನದ ಹೆಸರಿನಲ್ಲಿ ಸಾವಿರಾರು ರುಪಾಯಿ ದುಂದು ವೆಚ್ಚ ಮಾಡಲು ಕುದೂರು ಗ್ರಾಪಂ ಸದಸ್ಯರು ಮುಂದಾಗಿದ್ದಾರೆ.

ಗ್ರಾಮದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕೆಲವರ ವೈಯಕ್ತಿಕ ದ್ವೇಷಗಳಿಗಾಗಿ ತಡೆ ಹಿಡಿಯುತ್ತಿದ್ದಾರೆ. ಈ ಕುರಿತಾಗಿ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಸಿಸಿ ಕ್ಯಾಮರಾ ಅಳವಡಿಸಲು ಪಂಚಾಯ್ತಿಯಲ್ಲಿ ಹಣವಿಲ್ಲ ಎನ್ನುತ್ತಾರೆ. ಇದೆಲ್ಲದರ ನಡುವೆ ಪಂಚಾಯ್ತಿ ಸದಸ್ಯರ ಅವಧಿ ಮುಗಿಯಲು ಕೇವಲ ನಾಲ್ಕು ತಿಂಗಳು ಬಾಕಿ ಇದೆ. ಅಂತಹುದರಲ್ಲಿ ಕಸ ವಿಲೇವಾರಿ ತಿಳಿದು ಬರಲು ಎಲ್ಲಾ ಸದಸ್ಯರು ಪ್ರವಾಸ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಧ್ಯಯನ ಹೆಸರಿನಲ್ಲಿ ಸಾವಿರಾರು ರುಪಾಯಿಗಳ ಖರ್ಚು ಪಂಚಾಯ್ತಿಯೇ ಭರಿಸಬೇಕು. ಪ್ರವಾಸಕ್ಕೆ ಹೋಗಿ ಬರುವ ವೆಚ್ಚದಲ್ಲಿ ಗ್ರಾಮದಲ್ಲಿ ಹತ್ತಕ್ಕಿಂತ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಬಹುದು. ಅಭಿವೃದ್ಧಿ ಕಡೆಗೆ ಗಮನ ಕೊಡದೆ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಮತ್ತು ಕೆಲವು ಸದಸ್ಯರ ಈ ನಡೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ.

ವಸ್ತುಗಳ ಪೂರೈಸದಿದ್ದರು 16 ಲಕ್ಷ ಮಂಜೂರು:

ಗ್ರಾಮದ ವಿದ್ಯುತ್ ದೀಪಗಳಿಗೆ ಸಂಬಂಧಿಸಿದಂತೆ 16 ಲಕ್ಷ ರು.ಗಳ ಬಿಲ್ ಮಂಜೂರು ಮಾಡಲು ಪಂಚಾಯತಿಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಆದರೆ ಅಚ್ಚರಿ ವಿಷಯವೆಂದರೆ 16 ಲಕ್ಷ ವಸ್ತುಗಳನ್ನು ಪಂಚಾಯ್ತಿಗೆ ಪೂರೈಸಿಯೇ ಇಲ್ಲ. ಈ ಹಿಂದಿನ ಪಿಡಿಒ ಅವಧಿಯಲ್ಲಿ ಇಂತಹ ಅವ್ಯವಹಾರ ಆಗಿದೆ ಎಂದು ಇದೇ ಪಂಚಾಯ್ತಿ ಸದಸ್ಯರು ಸಭೆಯಲ್ಲಿ ವಿರೋಧಿಸಿ ಹಣ ನೀಡಬೇಡಿ ಎಂದು ತೀರ್ಮಾನಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಕೆಲ ಸದಸ್ಯರು ಹಣ ಮಂಜೂರು ಮಾಡಿ ಎಂದು ಪಂಚಾಯ್ತಿಯ ಅಧಿಕಾರಿಗಳಿಗೆ ದಂಬಾಲು ಬಿದ್ದಿದ್ದಾರೆ. ಹೀಗೆ ಬಿಲ್ ಪಾಸ್ ಮಾಡಿಕೊಟ್ಟರೆ ಅಂಗಡಿ ಮಾಲೀಕನಿಂದ ಕಮೀಷನ್ ಮಾತುಕತೆ ನಡೆದಿರಬಹುದು. ಅದಕ್ಕಾಗಿ ಹಣ ಮಂಜೂರು ಮಾಡಲು ಸದಸ್ಯರು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆರೆಯ ಜಾಗದ ಮನೆಗಳಿಗೆ ಅಕ್ರಮ ಖಾತೆ :

ಕುದೂರು ಗ್ರಾಮದ ಶಿವಗಂಗೆ ರಸ್ತೆಯಲ್ಲಿ ಶ್ರೀ ಕೃಷ್ಣರಾಜ ಕೆರೆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅದರಲ್ಲಿ ಏಳೆಂಟು ಜನರಿಗೆ ಪಂಚಾಯತಿ ವತಿಯಿಂದ ಖಾತೆ ಮಾಡಿಕೊಡಲಾಗಿದೆ. ಕೆರೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದು, ತೋಟ ಮಾಡಿಕೊಂಡಿದ್ದರೂ ಕೂಡ ತೆರವು ಮಾಡಿಕೊಡಬೇಕಾಗುತ್ತದೆ. ಕಾನೂನನ್ನು ಶಿಸ್ತಾಗಿ ಜಾರಿಗೆ ತಂದರೆ ಮತ್ತು ಕೆರೆಯ ಜಾಗ ಸರ್ವೆ ಮಾಡಿದರೆ ಖಾತೆಯಾಗಿ ಮನೆ ಕಟ್ಟಿಕೊಂಡಿರುವವರು ಮನೆಯ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳದೇ ಇರಲಾರದು. ಈ ಹಿಂದೆ ಕೆಲಸ ನಿರ್ವಹಿಸಿದ್ದ ಪಂಚಾಯ್ತಿ ಅಧಿಕಾರಿ ಹಾಗು ಗ್ರಾಮಪಂಚಾಯ್ತಿ ಅಂದಿನ ಆಡಳಿತ ಮಂಡಳಿಯವರು ಖಾತೆ ಮಾಡಿಕೊಟ್ಟಿದ್ದಾರೆ. ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರು ಮುಂದೊಂದು ದಿನ ತೊಂದರೆ ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪಂಚಾಯ್ತಿ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಬಿಟ್ಟು ಮೌನ ತಾಳಿದ್ದಾರೆ.

ಕಂದಾಯ ಎರಡು ಮೂರು ಪಟ್ಟು ಹೆಚ್ಚಳ:

ಕರ್ನಾಟಕ ಸರ್ಕಾರ ಈಗಾಗಲೇ ಎಲ್ಲದರ ಬೆಲೆಗಳನ್ನು ಹೆಚ್ಚು ಮಾಡಿದ್ದು, ಗ್ರಾಮಪಂಚಾಯ್ತಿ ಕಂದಾಯಗಳ ಮೇಲೂ ಕಣ್ಣು ಹಾಕಿದ್ದು ಈಗಿರುವ ಕಂದಾಯವನ್ನು ದುಪ್ಪಟು ಮಾಡಿದ್ದಾರೆ. ಗ್ರಾಮದ ಲಕ್ಷ್ಮಮ್ಮ ಎಂಬುವರ ಚಿಕ್ಕದೊಂದು ಮನೆಗೆ ಕಂದಾಯ 2022 ರಲ್ಲಿ 384 ರು. ಕಟ್ಟಲಾಗಿತ್ತು. 2025ರಲ್ಲಿ 3530 ರು.ಗಳನ್ನು ಕಂದಾಯ ಕಟ್ಟಿಸಿಕೊಳ್ಳಲಾಗಿದೆ.

ಶುದ್ಧ ನೀರಿನ ಘಟಕ ದುರಸ್ತಿ ಆಗಿಲ್ಲ :

ಮರೂರು ರಸ್ತೆ ಮಸೀದಿ ಬಳಿಯಿರುವ ಶುದ್ದ ನೀರಿನ ಘಟಕ ಕೆಟ್ಟು ಎರಡು ತಿಂಗಳಾಯಿತು. ಇದರ ಕುರಿತು ಸಾರ್ವಜನಿಕರು ರಿಪೇರಿ ಮಾಡುವಂತೆ ಪಂಚಾಯ್ತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ರಿಪೇರಿ ಮಾಡಲಿಲ್ಲ. ಪತ್ರಿಕೆಯಲ್ಲಿ ಈ ಸಮಸ್ಯೆ ಕುರಿತು ವರದಿ ಪ್ರಕಟಗೊಂಡು ತಿಂಗಳಾಯಿತು. ಆಗ ಇನ್ನೊಂದು ವಾರದಲ್ಲಿ ಸರಿಪಡಿಸುತ್ತೇವೆ ಎಂದು ಪಂಚಾಯ್ತಿ ಅಧಿಕಾರಿಗಳು ಹೇಳಿದ್ದರು. ಆದರೆ ಇದುವರೆಗೂ ಸರಿಪಡಿಸಲಿಲ್ಲ.

ಸ್ಮಶಾನದ ಕೊರತೆ :

ಕುದೂರು ಗ್ರಾಮದ ಜನಸಂಖ್ಯೆ ಹದಿನೈದು ಸಾವಿರ ದಾಟಿದ್ದರು ಎಲ್ಲಾ ಜನಾಂಗದವರಿಗೂ ಇರುವ ಸಾರ್ವಜನಿಕ ರುದ್ರಭೂಮಿ ಕೇವಲ ಮುಕ್ಕಾಲು ಎಕರೆ ಮಾತ್ರ. ಸಂಸ್ಕಾರಕ್ಕೆ ಗುಂಡಿಗಳನ್ನು ತೆಗೆಯುವಾಗ ಕೆಳಗೊಂದು ಹೆಣ ಸಿಗುತ್ತದೆ. ಕುದೂರು ಗ್ರಾಮ ಇಂತಹ ದುಃಸ್ಥಿತಿಯಲ್ಲಿದೆ. ಆದರೆ ಇದರ ಬಗ್ಗೆ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಸದಸ್ಯರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

16ಕೆಆರ್ ಎಂಎನ್ 1,2,3.ಜೆಪಿಜಿ

1.ಕುದೂರು ಗ್ರಾಮಪಂಚಾಯ್ತಿ ಕಟ್ಟಡ

2.ಕೆಟ್ಟು ನಿಂತಿರುವ ಮರೂರು ರಸ್ತೆಯ ಮಸೀದಿ ಬಳಿ ಶುದ್ದ ನೀರಿನ ಘಟಕ

3.ದುಪ್ಪಟಗೊಂಡಿರುವ ಒಂದೇ ಮನೆಯ ಪಂಚಾಯ್ತಿ ಕಂದಾಯದ ರಸೀದಿ