ಕುಡಿಯುವ ನೀರಿನ ಸಮಸ್ಯೆ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ಕೃಷಿ ಸಾಲಮನ್ನಾ ಮಾಡಬೇಕು. ಕೂಲಿ ಸಿಗದೇ ಗುಳೆ ಹೋಗುವ ಸಂಭವಗಳು ಹೆಚ್ಚಾಗಿವೆ.

ನರಗುಂದ: ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಿದೆ. ಹೊಲದಲ್ಲಿ ಒಣಗುತ್ತಿರುವ ಬೆಳೆಯನ್ನು ಉಳಿಸಿಕೊಳ್ಳುವಲ್ಲಿ ರೈತನು ಹೋರಾಡುತ್ತಿದ್ದಾನೆ. ಆದರೆ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ, ಅಧಿವೇಶನ ನಡೆಸದೇ ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳೆರೆಡೂ ಕಾಲಹರಣ ಮಾಡುತ್ತಿವೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದಿಂದ ತಹಸೀಲ್ದಾರ್ ಶ್ರೀಶೈಲ ತಳವಾರ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಿ ಮಾತನಾಡಿ, ರಾಜ್ಯ ವಿಧಾನಮಂಡಲ ಅಧಿವೇಶನ ನಡೆಸದೇ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿರುವುದು ರೈತ ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ ಅವಮಾನವಾಗಿದೆ.

ಕುಡಿಯುವ ನೀರಿನ ಸಮಸ್ಯೆ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ಕೃಷಿ ಸಾಲಮನ್ನಾ ಮಾಡಬೇಕು. ಕೂಲಿ ಸಿಗದೇ ಗುಳೆ ಹೋಗುವ ಸಂಭವಗಳು ಹೆಚ್ಚಾಗಿವೆ. ಇವೆಲ್ಲ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸದೇ ಸಚಿವ ನಾಗೇಂದ್ರ ರಾಜೀನಾಮೆ ನೆಪವನ್ನಿಟ್ಟುಕೊಂಡು ವಿಧಾನಸಭೆ ಹೊರಗಡೆ ಕಾಲಹರಣದ ಹೋರಾಟಗಳು ನಡೆಯುತ್ತಿವೆ.

ಅವರು ರಾಜೀನಾಮೆ ಕೊಡದವರು, ಇವರು ಬಿಡದವರು. ಇವರ ಮಧ್ಯ ರೈತರ ಸಮಸ್ಯೆಗಳು ಹಾಗೇ ಉಳಿದಿವೆ. ಜನಪ್ರತಿನಿಧಿಗಳು ಕಾಲಹರಣ ಬಿಟ್ಟು ರೈತರ ಸಮಸ್ಯೆಗಳತ್ತ ಗಮನ ಹರಿಸಬೇಕು. ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಭೀಕರ ಬರಗಾಲ ಎದುರಿಸುತ್ತಿರುವ ರೈತರ ಕೃಷಿ ಸಾಲಮನ್ನಾ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕೆಂದು ಹೇಳಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ಶಂಕರಗೌಡ ಶಿರಿಯಪ್ಪಗೌಡ್ರ, ಬಸಯ್ಯ ಹೊರಗಿನಮಠ, ಚನ್ನು ನಂದಿ, ತಿಮ್ಮರಡ್ಡಿ ವಾಸನ, ರೆಹಮಾನಸಾಬ ಅಲ್ಲಿಬಾಯಿ, ನಂದೀಶ, ಶ್ರೀಶೈಲ ಸೇರಿದಂತೆ ಮುಂತಾದವರು ಇದ್ದರು.