ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಾಟಾಳ್ ವಿರೋಧ

| Published : Dec 20 2024, 12:46 AM IST

ಸಾರಾಂಶ

ರಾಮನಗರ: ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದನ್ನು ವಿರೋಧಿಸಿ ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುರುವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದನ್ನು ವಿರೋಧಿಸಿ ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು, ಸರ್ಕಾರ ಸಾಹಿತ್ಯ ಸಮ್ಮೇಳನ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲಿಗೆ ಕನ್ನಡ ಭಾಷೆ ಉಳಿಸಲು ಮುಂದಾಗಬೇಕು. ನಮಗೆ ಸಮ್ಮೇಳನ ಬೇಡ. "ಕನ್ನಡ ಬೆಳೆಸಿ, ಕನ್ನಡ ಉಳಿಸಿ " ಎಂದು ಘೋ?ಣೆ ಕೂಗಿದರು.

ಸುಮ್ಮನೆ ಹೋಳಿಗೆ, ಕೋಸಂಬರಿ ತಿನ್ನೋದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಇದರಿಂದ ಏನು ಉದ್ದಾರವಾಗಿಲ್ಲ. ಸಮ್ಮೇಳನಕ್ಕೆ ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಸದನದಲ್ಲಿ ಯಾರು ಕನ್ನಡದ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ರೀತಿಯ ಸಾಹಿತ್ಯ ಸಮ್ಮೇಳನ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನ ನಡೆಸುವ ಬದಲು ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಕ್ರಮ ವಹಿಸಬೇಕು. ಅದರಿಂದ ಕನ್ನಡರಿಗೆ ಅನುಕೂಲವಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಅನ್ಯಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಬೆಂಗಳೂರು ಅನ್ಯ ಭಾಷಿಕರ ಪಾಲಾಗುತ್ತಿದೆ ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಜಗದೀಶ್, ಜಿಲ್ಲಾಧ್ಯಕ್ಷ, ಜಯಕುಮಾರ್, ತಾಲೂಕು ಅಧ್ಯಕ್ಷ ಬಿ.ಎನ್.ಗಂಗಾಧರ್, ಭಾಗ್ಯ ಸುಧಾ, ಜಯರಾಮು, ಬೆಂಗಳೂರು ಘಟಕದ ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣಸ್ವಾಮಿ, ಮಚ್ಚು ಮಹದೇವ ಇತರರು ಹಾಜರಿದ್ದರು.

ಬಾಕ್ಸ್;

ವಾಟಾಲ್ ಬಂಧನ, ಬಿಡುಗಡೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿದ ವಾಟಾಳ್ ನಾಗರಾಜು ಹಾಗೂ ಕನ್ನಡ ಪರ ಸಂಘಟನೆಯ ಮುಖಂಡರನ್ನು ಮುಖ್ಯ ದ್ವಾರದ ಬಳಿಯೇ ತಡೆದ ಪೊಲೀಸರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.

ಇದರಿಂದ ಆಕ್ರೋಶಗೊಂಡ ವಾಟಾಳ್ ನಾಗರಾಜು, ನಿಷೇಧದ ಬಳಿಕ ಯಾರಿಗೂ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದು ರಾಮನ ಮೇಲೆ ಆಣೆ ಮಾಡಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಸರ್ವಾಧಿಕಾರಿ ಜಿಲ್ಲೆಯ ರೀತಿ ಆಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ, ಆದರೆ, ರಾಮನಗರ ಜಿಲ್ಲೆಯಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಸ್ಥಳದಲ್ಲಿದ್ದ ಹೋರಾಟಗಾರರು ಜಿಲ್ಲಾಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ಉಸ್ತುವಾರಿ ಸಚಿವರಿಂದಲೂ ಈ ಬಗ್ಗೆ ಹೇಳಿಸಿದ್ದೇವೆ. ಆದರೂ ಯಾರ ಮಾತಿಗೂ ಬೆಲೆ ಸಿಗುತ್ತಿಲ್ಲ ಎಂದು ಧ್ವನಿಗೂಡಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಾಟಾಳ್ ಕನ್ನಡ ಪರ ಹೋರಾಟಗಾರರು ಹೋರಾಟ ಮಾಡಿದರೆ ಬಂಧನದ ಆದೇಶ ಇದೆಯಾ ತಿಳಿಸಿ? ಎಂದು ಪ್ರಶ್ನಿಸಿದರು.

ಇದಕ್ಕೆ ಸ್ಥಳದಲ್ಲಿಯೇ ಇದ್ದ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಮನವಿ ಬೇಕಾದರೆ ಕೊಡಬಹುದು ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜು, ಕನ್ನಡನೇ ನನ್ನ ಮನವಿ, ನಾನು ಕನ್ನಡ ಎಂದು ಕೂಗಿದ ಕೂಡಲೆ ನನ್ನನ್ನು ಬಂಧಿಸಿ ಎಂದರು. ಕೊನೆಯಲ್ಲಿ ಪೊಲೀಸರು ವಾಟಾಳ್ ನಾಗರಾಜು ಅವರನ್ನು ಬಂಧಿಸಿ, ಬಿಡುಗಡೆ ಗೊಳಿಸಿದರು.

ಪೊಟೋ೧೯ಸಿಪಿಟಿ೬:

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ವಾಟಾಳ್ ನಾಗರಾಜು ಪ್ರತಿಭಟನೆ ನಡೆಸಿದರು.