ಕಾಳಿ ನದಿಯಲ್ಲಿ ಜಲಸಾಹಸ ತರಬೇತಿ

| Published : Nov 14 2023, 01:15 AM IST / Updated: Nov 14 2023, 01:16 AM IST

ಸಾರಾಂಶ

ಕಾರವಾರ ತಾಲೂಕಿನ ಸದಾಶಿವಗಡದ ಬಳಿ ಇರುವ ಕಾಳಿ ನದಿಯಲ್ಲಿ ಮೊದಲ ತಂಡದ ರಾಜ್ಯ ಮಟ್ಟದ ಜಲಸಾಹಸ ತರಬೇತಿ ಶಿಬಿರ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ೩೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. ಇಲ್ಲಿ ತರಬೇತಿ ಪಡೆದು ಉತ್ತರ ಪ್ರದರ್ಶನ ನೀಡಿ ಶಿಬಿರಾರ್ಥಿಗಳಿಗೆ ರ‍್ಯಾಂಕಿಂಗ್ ನೀಡಿ ೪೦ ಜನರನ್ನು ಆಯ್ಕೆ ಮಾಡಿ ಅವರನ್ನು ಅಡ್ವಾನ್ಸ್ ಜಲಸಾಹಸಿ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಕಾರವಾರ: ತಾಲೂಕಿನ ಸದಾಶಿವಗಡದ ಬಳಿ ಇರುವ ಕಾಳಿ ನದಿಯಲ್ಲಿ ಮೊದಲ ತಂಡದ ರಾಜ್ಯ ಮಟ್ಟದ ಜಲಸಾಹಸ ತರಬೇತಿ ಶಿಬಿರ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ೩೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ಈ ಶಿಬಿರದಲ್ಲಿ ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಯಲ್ಲಾಪುರ ಸೇರಿದಂತೆ ಬೇರೆ ಬೇರೆ ಊರಿಗಳಿಂದ ಯುವಕ-ಯುವತಿಯರು ಪಾಲ್ಗೊಂಡಿದ್ದು, ಮೊದಲ ಹಾಗೂ ಎರಡನೇ ತಂಡಕ್ಕೆ ಕಾಳಿ ನದಿಯಲ್ಲಿ ತರಬೇತಿ ನಡೆಯುತ್ತದೆ. ಈ ಎರಡು ತಂಡದಿಂದ ಆಯ್ಕೆಯದವರಿಗೆ ದಾಂಡೇಲಿಯ ಗಣೇಶ ಗುಡಿಯಲ್ಲಿ ಜಲಸಾಹಸ ತರಬೇತಿ ನೀಡಲಾಗುತ್ತಿದೆ.

ಜೆತ್ನಾ ಇನ್‌ಸ್ಟ್ರಕ್ಟರ್ ಪ್ರಕಾಶ ಹರಿಕಂತ್ರ ಮಾತನಾಡಿ, ಕಳೆದ ೨೫ ವರ್ಷಗಳಿಂದ ಜಿಲ್ಲೆಯಲ್ಲಿ ಜಲಸಾಹಸಿ ಚಟುವಟಿಕೆ ನಡೆಸಲಾಗುತ್ತಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ನಮಗೆ ಸರಿಯಾದ ಸ್ಥಳಾವಕಾಶ ಲಭ್ಯವಾಗಿರಲಿಲ್ಲ. ಆದರೆ ಇದೀಗ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಸೇರಿದ ಕಟ್ಟಡವನ್ನು ನೀಡಿದ್ದು, ಇದು ಮೊದಲ ಶಿಬಿರವಾಗಿದೆ. ಬಳಿಕ ಮತ್ತೊಂದು ಶಿಬಿರ ಇಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಪ್ರಮುಖವಾಗಿ ಶಿಬಿರಾರ್ಥಿಗಳಿಗೆ ಈಜು ತರಬೇತಿ, ರ‍್ಯಾಫ್ಟಿಂಗ್, ಕಯಾಕಿಂಗ್, ರೆಸ್ಕ್ಯೂಬ್ ತರಬೇತಿ ನೀಡಲಾಗುತ್ತಿದೆ. ಮತ್ತೊಂದು ತಂಡಕ್ಕೂ ಇದೇ ತರಬೇತಿ ಇರುತ್ತದೆ. ಬಳಿಕ ಇಲ್ಲಿ ತರಬೇತಿ ಪಡೆದು ಉತ್ತರ ಪ್ರದರ್ಶನ ನೀಡಿ ಶಿಬಿರಾರ್ಥಿಗಳಿಗೆ ರ‍್ಯಾಂಕಿಂಗ್ ನೀಡಿ ೪೦ ಜನರನ್ನು ಆಯ್ಕೆ ಮಾಡಿ ಅವರನ್ನು ಅಡ್ವಾನ್ಸ್ ಜಲಸಾಹಸಿ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಮುಂದೆ ಸ್ವ ಉದ್ಯೋಗ, ರೆಸ್ಕ್ಯೂಬ್ ತಂಡ, ಇದಲ್ಲದೆ ಜಲಸಾಹಸಿ ಚಟುವಟಿಕೆ ಕೂಡ ಪ್ರಾರಂಭಿಸಲು ವಿಪುಲ ಅವಕಾಶಗಳಿವೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕ-ಯುವತಿಯರಿಗೆ ಒಟ್ಟೂ ೧೦ ದಿನಗಳ ಕಾಲ ಎರಡು ತಂಡಕ್ಕೆ ಪ್ರತ್ಯೇಕ ಈ ಶಿಬಿರ ಆಯೋಜನೆ ಮಾಡಲಾಗಿದೆ.

ವಸತಿ ನಿಲಯ ಹಸ್ತಾಂತರ: ಸದಾಶಿವಗಡದ ಕಾಳಿ ನದಿ ತೀರದ ಬಳಿ ಒಂದು ಕೋಟಿ ರು. ವೆಚ್ಚದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಿಂದ ವಸತಿ ನಿಲಯ ನಿರ್ಮಾಣ ಮಾಡಲಾಗಿತ್ತು. ಆದರೆ ಇದು ಸರಿಯಾಗಿ ಬಳಕೆಯಾಗದ ಕಾರಣ ಹಾಸ್ಟೆಲ್‌ನ್ನು ಜಂಗಲ್ ರೆಸಾರ್ಟ್‌ಗೆ ಹಸ್ತಾಂತರಿಸಲಾಗಿತ್ತು. ಈ ವರ್ಷ ವಾಪಸ್ ಪಡೆಯಲಾಗಿದ್ದು, ಜೇತ್ನಾಕ್ಕೆ ನೀಡಲಾಗಿದೆ. ಜಲಸಾಹಸಿ ತರಬೇತಿಯ ಮೊದಲ ತಂಡದ ಶಿಬಿರ ಪ್ರಾರಂಭಗೊಂಡಿದ್ದು, ಈ ಮೊದಲಿನಂತೆ ಜಲಸಾಹಸಿ ತರಬೇತಿ ಚಟುವಟಿಕೆ ನಡೆಸಲಾಗುವುದು ಎಂದು ಜೆತ್ನಾ ಇನ್‌ಸ್ಟ್ರಕ್ಟರ್‌ ಪ್ರಕಾಶ ಹರಿಕಂತ್ರ ಹೇಳಿದರು.

ಸಮುದ್ರದಲ್ಲಿ ಇದುವರೆಗೂ ತರಬೇತಿ ಪಡೆದಿರಲಿಲ್ಲ. ಬಂದ ಎರಡೇ ದಿನದಲ್ಲಿ ಈಜು ಕಲಿತು ಇದೀಗ ರ‍್ಯಾಫ್ಟಿಂಗ್ ಕೂಡ ಮಾಡುತ್ತಿದ್ದೇವೆ. ಜಲ ಸಾಹಸಿ ತರಬೇತಿ ಶಿಬಿರ ಸಾಕಷ್ಟು ಸಹಕಾರಿಯಾಗಿದ್ದು, ಸ್ವ ಉದ್ಯೋಗಕ್ಕೂ ಇದು ಬುನಾದಿಯಾಗಿದೆ ಎಂದು ಬೆಂಗಳೂರಿನಿಂದ ಬಂದ ಶಿಬಿರಾರ್ಥಿ ಮೌಲ್ಯಾ ಹೇಳಿದರು.