ಸಂಡೂರು: ನೀರು ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತು. ನೀರು ಎಲ್ಲ ಜೀವಿಗಳಿಗೂ ಅಗತ್ಯವಾಗಿದೆ. ನೀರನ್ನು ಸಂರಕ್ಷಿಸಿ, ಮುಂದಿನ ಜನಾಂಗಕ್ಕೂ ಶುದ್ಧವಾಗಿ ದೊರೆಯುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜೆಎಸ್‌ಡಬ್ಲು ಫೌಂಡೇಶನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಫರ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕುಮಾರಸ್ವಾಮಿ ಮೇಟಿ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್.ಇಎಸ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಭಾನುವಾರ ಎಫರ್ಟ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಫರ್ಟ್ ಸಂಸ್ಥೆ ವತಿಯಿಂದ ನೀರಿನ ಸಂರಕ್ಷಣೆಗಾಗಿ ಮಳೆ ಕೊಯ್ಲು, ಚೆಕ್ ಡ್ಯಾಂ ನಿರ್ಮಾಣ, ಕೆರೆ ಬಾವಿಗಳ ಹೂಳೆತ್ತುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆ ನೀರನ್ನು ಸಂರಕ್ಷಿಸಿ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಇಂತಹ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಎಸ್.ಇ.ಎಸ್ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕಿ ಜಿ. ಜಯಶ್ರೀ ಹಾಗೂ ಮುಖ್ಯ ಶಿಕ್ಷಕ ಕಲ್ಲಯ್ಯಮಠ ಅವರು ಮಾತನಾಡಿ, ೧೯೯೩ರಿಂದ ವಿಶ್ವ ಜಲದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಲಭ್ಯವಿರುವ ನೀರನ್ನು ಮಲೀನ ಮಾಡದೆ, ಅದನ್ನು ಸಂರಕ್ಷಿಸಬೇಕಿದೆ. ಭೂಮಿಯಲ್ಲಿ ಜನರ ಬಳಕೆಗಾಗಿ, ಪ್ರಾಣಿ ಪಕ್ಷಿಗಳು, ಕೃಷಿ ಹಾಗೂ ಕೈಗಾರಿಕೆಗಾಗಿ ಲಭ್ಯವಿರುವ ಸಿಹಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮಳೆ ನೀರು ಕೊಯ್ಲು ಮಾಡುವ ವಿಧಾನ, ಹರಿಯುವ ಹಳ್ಳಗಳಿಗೆ ಚೆಕ್‌ಡ್ಯಾಂ ನಿರ್ಮಿಸುವುದು, ನದಿಗಳಿಗೆ ಆಣೆಕಟ್ಟುಗಳನ್ನು ಕಟ್ಟಿ ನೀರನ್ನು ಸಂರಕ್ಷಿಸಲಾಗುತ್ತಿದೆ. ನೀರನ್ನು ಮಿತವಾಗಿ ಬಳಸಬೇಕು ಮತ್ತು ನೀರನ್ನು ಸಂರಕ್ಷಿಸಲು ಎಲ್ಲರೂ ಶ್ರಮಿಸಬೇಕು ಎಂದರು.ವಿದ್ಯಾರ್ಥಿನಿಯರಾದ ಎಸ್. ಶಾಂತಮ್ಮ ಹಾಗೂ ಬಿ.ಎಂ. ಸುಜಾತ ಅವರು ಜಲ ಸಂರಕ್ಷಣೆಯ ಅಗತ್ಯತೆಯ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಜೆ. ಕಾವೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮನೋಹರ್, ಅಚಲಾ, ಶಿವಾರೆಡ್ಡಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಂಡೂರಿನ ಎಸ್.ಇ.ಎಸ್. ಬಾಲಕಿಯರ ಪ್ರೌಢ ಶಾಲೆಯಲ್ಲಿ ಭಾನುವಾರ ಎಫರ್ಟ್ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ಜಲ ದಿನವನ್ನು ಆಚರಿಸಲಾಯಿತು.