ಜಲ ಸಂರಕ್ಷಣೆ ಅತಿ ಅವಶ್ಯ: ದೇವೇಂದ್ರ ಪಂಡಿತ್

| Published : Mar 23 2024, 01:04 AM IST

ಸಾರಾಂಶ

ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಪಂ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ವಿಶ್ವ ಜಲ ದಿನಾಚರಣೆ ಹಾಗೂ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಕಾರ್ಯಕ್ರಮ ನಡೆಯಿತು.

ಕೊಪ್ಪಳ: ಜಲ ಪ್ರತಿಯೊಬ್ಬರ ಬದುಕಿಗೆ ಅವಶ್ಯ. ಮಾನವನ ಬದುಕು ಸುಗಮವಾಗಬೇಕಾದರೆ ಜಲ ಸಂರಕ್ಷಣೆ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ಕೊಪ್ಪಳದ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ದೇವೇಂದ್ರ ಪಂಡಿತ್ ಕರೆ ನೀಡಿದರು.ತಾಲೂಕಿನ ಬಹದ್ದೂರಬಂಡಿ ಗ್ರಾಪಂ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಪಂ ಬಹದ್ದೂರಬಂಡಿ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಹಾಗೂ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ಹನಿ ಕೂಡಾ ಅಮೂಲ್ಯವಾದದ್ದು. ಮಾನವನು ಒಂದು ದಿನ ಆಹಾರವಿಲ್ಲದೇ ಬದುಕಬಹುದು. ಆದರೆ ನೀರು ಇಲ್ಲದಿದ್ದರೆ ಬದುಕುವುದು ಅಸಾಧ್ಯ. ಆ ದಿಸೆಯಲ್ಲಿ ಗ್ರಾಮದಲ್ಲಿ ಮನೆಯ ಮುಂದೆ ನಲ್ಲಿಗಳ ಮೂಲಕ ಹರಿದು ಹೋಗದಂತೆ ಕ್ರಮವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಮೀನಿನ ಫಲವತ್ತತೆ ಹೆಚ್ಚಳವಾಗಬೇಕಾದರೆ ಬದುಗಳನ್ನು ನಿರ್ಮಿಸಿಕೊಳ್ಳುವುದರಿಂದ ಮಳೆಯ ನೀರು ತುಂಬಿ ಜಮೀನಿನ ತೇವಾಂಶ ಕಾಪಾಡುತ್ತದೆ. ಕೃಷಿಹೊಂಡ ನಿರ್ಮಿಸಿಕೊಳ್ಳುವುದರಿಂದ ಮಳೆಯ ನೀರು ಸಂಗ್ರಹಣೆಯಾಗುವ ಜತೆಗೆ ಒಂದು ವೇಳೆ ಮಳೆ ಬಾರದಿದ್ದಲ್ಲಿ ಕೃಷಿಹೊಂಡದಲ್ಲಿರುವ ನೀರಿನಿಂದ ಬೇಸಾಯಕ್ಕೆ ಸಹಕಾರಿಯಾಗುತ್ತದೆ. ಅಲ್ಲದೇ ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯಲು ನೀರು ಅನುಕೂಲವಾಗುತ್ತದೆ ಎಂದರು. ಜಲ, ಮಣ್ಣು, ವನ್ಯ ಸಂಪತ್ತುಗಳನ್ನು ನಾವು ಉಳಿಸಬೇಕು, ಬಳಸಬೇಕು, ಮುಂದುವರಿಸಿಕೊಂಡು ಹೋದಲ್ಲಿ ಮಾತ್ರ ಪರಿಸರದಲ್ಲಿ ಸಮತೋಲನಕ್ಕೆ ದಾರಿಯಾಗುತ್ತದೆ. ಹಿಂದಿನ ಕಾಲದಲ್ಲಿ ಬರಗಾಲ ಸಂದರ್ಭದಲ್ಲಿ ಅನೇಕ ರಾಜರು ಜಲ ಕೊರತೆಯನ್ನು ನೀಗಿಸಲು ತಮ್ಮ ರಾಜ್ಯದ ಆಸ್ತಿಯನ್ನು ಕೊಟ್ಟು ನೀರನ್ನು ಕೊಂಡುಕೊಳ್ಳುವ ಹಂತಕ್ಕೆ ಹೋಗಿರುವುದನ್ನು ನಾವು ಕೇಳಿದ್ದೇವೆ ಎಂದರು. ಸಮಾಜದಲ್ಲಿ ನಾವು ಹೊಂದಾಣಿಕೆ ಮನೋಭಾವ ಹೊಂದಿರಬೇಕು. ಯಾವುದೇ ವ್ಯಾಜ್ಯ ಉಂಟಾದಾಗ ಪರಸ್ಪರ ಕುಳಿತುಕೊಂಡು ಚರ್ಚಿಸಿ ಪರಿಹರಿಸಿಕೊಳ್ಳುವುದರಿಂದ ನ್ಯಾಯಾಲಯಕ್ಕೆ ಬರುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಮೇ 7ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಎಫ್‌ಇಎಸ್‌ ಸಂಯೋಜಕ ವಾಸುದೇವಮೂರ್ತಿ ಮಾತನಾಡಿ, ನೀರಿನ ಸರಂಕ್ಷಣೆಗೆ ಆದ್ಯತೆ ನೀಡದೇ ಇದ್ದಲ್ಲಿ ನಾವು ದುಡಿದ ಹಣವನ್ನು ನೀಡಿ ನೀರನ್ನು ಕೊಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಜಲ ಸಂಪತ್ತು, ಸಸ್ಯ ಸಂಪತ್ತು, ಮಾನವ ಸಂಪತ್ತು ಉಳಿಯಬೇಕಾದರೆ ಇವುಗಳ ಸಂರಕ್ಷಣೆಗೆ ಮಾನವ ಯೋಚಿಸಬೇಕು. ಜಗತ್ತು ಸುಗಮವಾಗಿ ನಡೆಯಬೇಕಾದರೆ ಕಾಲಕಾಲಕ್ಕೆ ಇವುಗಳ ಬಗ್ಗೆ ಚಿಂತನೆ, ಜಾಗೃತಿ ಮೂಡಿಸುವುದು ಅತಿ ಅವಶ್ಯವೆಂದರು.

ಮತದಾರರ ಪ್ರತಿಜ್ಞೆ ವಿಧಿಯನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ ಬೋಧಿಸಿದರು. ಆನಂತರ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಜರುಗಿಸಲಾಯಿತು.

ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಮಹೇಶ್‌, ಮುಖ್ಯಕಾನೂನು ಅಭಿರಕ್ಷಕ ರವಿ ಶಿಗೇನಹಳ್ಳಿ, ಉಪ ಕಾನೂನು ಅಭಿರಕ್ಷಕ ಪ್ರದೀಪಕುಮಾರ, ತಾಲೂಕು ಯೋಜನಾಧಿಕಾರಿ ರಾಜೇಸಾಬ್‌ ನದಾಫ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರುದ್ರಯ್ಯ ಹಿರೇಮಠ, ಸೋಮಶೇಖರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕು ಸ್ವೀಪ್‌ ಸಮಿತಿ ಸದಸ್ಯ ಬಸವರಾಜ ಬಳಿಗಾರ, ವೀರೇಶ್‌ ಬಡಿಗೇರ, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರರು, ನರೇಗಾ ಕೂಲಿಕಾರರು ಹಾಜರಿದ್ದರು.